ADVERTISEMENT

ಗೂಢಚಾರ ತಂತ್ರಾಂಶ ದುರ್ಬಳಕೆ ತಡೆ: ವೀಸಾ ಮೇಲೆ ನಿರ್ಬಂಧ ಜಾರಿಗೆ ಮುಂದಾದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 13:26 IST
Last Updated 6 ಫೆಬ್ರುವರಿ 2024, 13:26 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ವಾಷಿಂಗ್ಟನ್: ಗೂಢಚಾರ ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಳ್ಳುವ ವಿದೇಶಿ ಪ್ರಜೆಗಳ ವೀಸಾ ಮೇಲೆ ನಿರ್ಬಂಧ ವಿಧಿಸಲು ಅವಕಾಶ ಕಲ್ಪಿಸುವ ಹೊಸ ನೀತಿಯನ್ನು ಜಾರಿಗೊಳಿಸುವುದಾಗಿ ಅಮೆರಿಕ ಹೇಳಿದೆ.

ಪತ್ರಕರ್ತರು, ಹೋರಾಟಗಾರರು, ಯಾವುದೇ ವಿಷಯವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರು, ಶೋಷಿತ ಸಮುದಾಯ ಅಥವಾ ಅವರ ಕುಟುಂಬಗಳ ಸದಸ್ಯರು ಸೇರಿದಂತೆ ವ್ಯಕ್ತಿಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲು ವಾಣಿಜ್ಯ ಬಳಕೆ ಉದ್ದೇಶದಿಂದ ಪಡೆದಿರುವ ಗೂಢಚಾರ ತಂತ್ರಾಂಶವನ್ನು ದುರ್ಬಳಕೆ ಮಾಡುವವರಿಗೆ ಈ ನೂತನ ನೀತಿ ಅನ್ವಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ 

ADVERTISEMENT

ಇಂತಹ ಕೃತ್ಯಕ್ಕೆ ನೆರವಾಗುವವರು ಹಾಗೂ ತಂತ್ರಾಂಶದ ದುರ್ಬಳಕೆಯಿಂದ ಆರ್ಥಿಕವಾಗಿ ಲಾಭ ಮಾಡಿಕೊಳ್ಳುವವರಿಗೂ ಈ ನಿರ್ಬಂಧಗಳು ಅನ್ವಯಿಸುತ್ತವೆ ಎಂದೂ ಹೇಳಿದ್ದಾರೆ.

ಹೊಸ ನೀತಿ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್, ‘ವಾಣಿಜ್ಯ ಬಳಕೆ ಉದ್ದೇಶದಿಂದ ಪಡೆಯುವ ಗೂಢಚಾರ ತಂತ್ರಾಂಶವನ್ನು ಜಗತ್ತಿನೆಲ್ಲೆಡೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಾಹಿತಿಯ ಸುಲಲಿತ ಪ್ರಸರಣ ತಡೆಯಲು ಹಾಗೂ ಮಾನವ ಹಕ್ಕುಗಳನ್ನು ಹತ್ತಿಕ್ಕುವುದಕ್ಕೆ ಕೂಡ ಬಳಸಲಾಗುತ್ತಿರುವುದು ಅಮೆರಿಕದ ಕಳವಳಕ್ಕೆ ಕಾರಣ’ ಎಂದು ಹೇಳಿದ್ದಾರೆ.

‘ಗೂಢಚಾರ ತಂತ್ರಾಂಶದ ದುರ್ಬಳಕೆಯು ಖಾಸಗಿತನ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಜನರು ಶಾಂತಿಯುತವಾಗಿ ಸಭೆ ಸೇರುವುದಕ್ಕೆ ಬೆದರಿಕೆ ಒಡ್ಡುತ್ತಿದೆ. ಮತ್ತೊಂದೆಡೆ, ವ್ಯಕ್ತಿಗಳನ್ನು ವಿನಾಕಾರಣ ಬಂಧಿಸುವುದಕ್ಕೆ, ನಾಪತ್ತೆಯಾಗುವುದು ಹಾಗೂ ಕೆಲ ಘೋರವಾದ ಪ್ರಕರಣಗಳಲ್ಲಿ ಹತ್ಯೆಗೂ ಇದು ಕಾರಣವಾಗುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.