ADVERTISEMENT

ಕಾಬೂಲ್‌: ಬೆದರಿಕೆಯ ನಡುವೆಯೂ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ ಅಮೆರಿಕ

ಏಜೆನ್ಸೀಸ್
Published 24 ಆಗಸ್ಟ್ 2021, 5:56 IST
Last Updated 24 ಆಗಸ್ಟ್ 2021, 5:56 IST
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೇನೆಯ ವಿಮಾನ ಪ್ರವೇಶಿಸಿದ ಜನರು  –ಎಪಿ/ಪಿಟಿಐ ಚಿತ್ರ
ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೇನೆಯ ವಿಮಾನ ಪ್ರವೇಶಿಸಿದ ಜನರು  –ಎಪಿ/ಪಿಟಿಐ ಚಿತ್ರ   

ವಾಷಿಂಗ್ಟನ್‌: ತಾಲಿಬಾನ್‌ ಹಿಡಿತದಲ್ಲಿರುವ ಅಫ್ಗಾನಿಸ್ತಾನದಿಂದ ಅಮೆರಿಕ ಸೋಮವಾರ ಅತಿ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನ ಮಿಲಿಟರಿ ವಿಮಾನಗಳ ಮೂಲಕ ಸ್ಥಳಾಂತರಿಸಿದೆ.

ಸೋಮವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಅಮೆರಿಕದ ಮಿಲಿಟರಿ ವಿಮಾನಗಳು ಸುಮಾರು 10,400 ಜನರನ್ನು ಸುರಕ್ಷಿತವಾಗಿ ಕರೆದೊಯ್ದಿವೆ. ನಂತರದ 12 ಗಂಟೆಗಳ ಅವಧಿಯಲ್ಲಿ ಸಿ–17ರ 15 ವಿಮಾನಗಳ ಮೂಲಕ 6,600 ಜನರನ್ನು ಸ್ಥಳಾಂತರಿಸಿವೆ ಎಂದು ಶ್ವೇತಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ಕಾಬೂಲ್‌ನಲ್ಲಿ ತಾಲಿಬಾನ್‌ಗಳ ಬೆದರಿಕೆಯೂ ಮುಂದುವರಿದಿದೆ. ಕಾಬೂಲ್‌ ವಿಮಾನ ನಿಲ್ದಾಣದ ಬಳಿ ನಡೆದ ಹಿಂಸಾಚಾರದಿಂದಾಗಿ ಹಲವರು ವಿಮಾನ ನಿಲ್ದಾಣಕ್ಕೆ ಬರಲು ಸಾಧ್ಯವಾಗಿಲ್ಲ. ಇದರಿಂದ ಅಮೆರಿಕವು ವಿಮಾನದ ಮೂಲಕ ಜನರನ್ನು ಸ್ಥಳಾಂತರಿಸುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, ತಾಲಿಬಾನ್‌ಗಳ ಜತೆ ಮಾತುಕತೆಯಲ್ಲಿ ತೊಡಗಿದೆ.

ADVERTISEMENT

‘ತಾಲಿಬಾನ್‌ ಕಮಾಂಡರ್‌ಗಳ ಸಮನ್ವಯದ ಕಾರಣ ಅಮೆರಿಕನ್ನರನ್ನು ಸ್ಥಳಾಂತರಿಸುವ ಕಾರ್ಯ ವೇಗ ಪಡೆದಿದೆ’ ಎಂದು ಪೆಂಟಗನ್‌ನ ಮುಖ್ಯ ವಕ್ತಾರ ಜೋನ್‌ ಕಿರ್ಬೈ ಹೇಳಿದ್ದಾರೆ.

ವಿಮಾನ ನಿಲ್ದಾಣದ ಹೊರಗಿರುವ ಜನಸಂದಣಿಯನ್ನು ಕಡಿಮೆ ಮಾಡುವ ಅಗತ್ಯವಿದ್ದು, ಇದಕ್ಕಾಗಿ ತಾಲಿಬಾನ್‌ಗಳ ಜತೆ ನಿರಂತರ ಸಮನ್ವಯದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣವನ್ನು ಪ್ರವೇಶಿಸುವುದು ಈಗಲೂ ಜನರಿಗೆ ಕಷ್ಟಕರವಾಗಿದೆ. ಹಾಗಾಗಿ ಅಮೆರಿಕ ಸೇನೆಯು ನಿಲ್ದಾಣದ ಹೊರಭಾಗದಿಂದ ಹೆಲಿಕಾಪ್ಟರ್‌ ಮೂಲಕ ಅಮೆರಿಕನ್ನರನ್ನು ಕರೆತರುತ್ತಿದೆ. ಸೋಮವಾರ ಸುಮಾರು 16 ಅಮೆರಿಕನ್ನರು ಈ ರೀತಿ ಹೆಲಿಕಾಪ್ಟರ್‌ ಮೂಲಕ ವಾಯುನೆಲೆಗೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಮೂರು ಸೇನಾ ಹೆಲಿಕಾಪ್ಟರ್‌ಗಳು ಗುರುವಾರ 169 ಅಮೆರಿಕನ್ನರನ್ನು ವಿಮಾನ ನಿಲ್ದಾಣದ ಹೊರಭಾಗದ ಹೋಟೆಲ್‌ ಬಳಿಯಿಂದ ಸುರಕ್ಷಿತವಾಗಿ ವಾಯುನೆಲೆಗೆ ಕರೆತಂದಿತ್ತು ಎಂದು ಕಿರ್ಬೈ ವಿವರಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿರುವ ಅಮೆರಿಕನ್ನರು ಮತ್ತು ಇತರರನ್ನು ಸುರಕ್ಷಿತವಾಗಿ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಇರುವ ಇತರ ಮಾರ್ಗಗಳ ಕುರಿತು ಶ್ವೇತಭವನವು ತಾಲಿಬಾನ್‌ಗಳ ಜತೆ ಮಾತುಕತೆ ಮುಂದುವರಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ತಿಳಿಸಿದ್ದಾರೆ.

ಆಗಸ್ಟ್‌ 14ರಿಂದ ಅಮೆರಿಕವು 37 ಸಾವಿರ ಜನರನ್ನು ಅಫ್ಗಾನಿಸ್ತಾನದಿಂದ ಸ್ಥಳಾಂತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.