ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಅಂತರರಾಷ್ಟ್ರೀಯ ಹಡಗುಗಳನ್ನು ಗುರಿಯಾಗಿಸಿಕೊಂಡಿರುವ ಇರಾನ್ ಬೆಂಬಲಿತ ಸೇನಾ ಪಡೆಯ ಸಾಮರ್ಥ್ಯ ಕುಗ್ಗಿಸಲು ಅಮೆರಿಕ, ಬ್ರಿಟನ್ ಮಿತ್ರ ರಾಷ್ಟ್ರಗಳು ಜಂಟಿಯಾಗಿ ಯೆಮೆನ್‌ನ 13 ಸ್ಥಳಗಳಲ್ಲಿ ಹುಥಿಗಳ 36 ಗುರಿಗಳ ಮೇಲೆ ಶನಿವಾರ ವೈಮಾನಿಕ ದಾಳಿ ನಡೆಸಿವೆ.
ಬ್ರಿಟನ್, ಆಸ್ಟ್ರೇಲಿಯಾ, ಬಹ್ರೇನ್, ಕೆನಡಾ, ಡೆನ್ಮಾರ್ಕ್, ನೆದರ್‌ಲ್ಯಾಂಡ್ ಮತ್ತು ನ್ಯೂಜಿಲೆಂಡ್ ದೇಶಗಳು ಈ ವೈಮಾನಿಕ ದಾಳಿಯಲ್ಲಿ ಪಾಲ್ಗೊಂಡಿವೆ ಎಂದು ಪೆಂಟಗಾನ್ ತಿಳಿಸಿದೆ.
ಕಳೆದ ಭಾನುವಾರ ಜೋರ್ಡಾನ್‌ನಲ್ಲಿ ಅಮೆರಿಕದ ಸೇನಾನೆಲೆ ಮೇಲೆ ಇರಾನ್ ಬೆಂಬಲಿತ ಬಂಡುಕೋರರು ಡ್ರೋನ್ ದಾಳಿ ನಡೆಸಿ, ಮೂವರು ಸೈನಿಕರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಅಮೆರಿಕವು ಸಿರಿಯಾ ಮತ್ತು ಇರಾಕ್‌ನಲ್ಲಿನ 85 ಗುರಿಗಳ ಮೇಲೆ ಶುಕ್ರವಾರವಷ್ಟೇ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಮತ್ತೇ 36 ಗುರಿಗಳ ಮೇಲೆ ದಾಳಿ ನಡೆದಿದೆ.
‘ಅಮೆರಿಕ ಮತ್ತು ಬ್ರಿಟನ್ ಸೇನೆ ಯೆಮೆನ್‌ನ ಹುಥಿ ನಿಯಂತ್ರಿತ ಪ್ರದೇಶಗಳ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿವೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ಕ್ರಮವು ಹುಥಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ. ಅವರು ಅಂತರರಾಷ್ಟ್ರೀಯ ಹಡಗುಗಳು ಮತ್ತು ನೌಕಾ ಹಡಗುಗಳ ಮೇಲೆ ದಾಳಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳನ್ನು ಅನುಭವಿಸುತ್ತಾರೆ’ ಎಂದು ಆಸ್ಟಿನ್ ಎಚ್ಚರಿಸಿದ್ದಾರೆ.
‘ಇದು ಜಗತ್ತಿನ ಅತ್ಯಂತ ನಿರ್ಣಾಯಕ ಜಲಮಾರ್ಗವಾಗಿದ್ದು, ವಾಣಿಜ್ಯ ಮುಕ್ತ ಸಂಚಾರ ಮತ್ತು ಜೀವಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.