ADVERTISEMENT

ಜವಾಹಿರಿಯನ್ನು ಕೊಲ್ಲಲು ನಿಂಜಾ ಬಾಂಬ್‌ ‘ಹೆಲ್‌ಫೈರ್‌ ಆರ್‌9ಎಕ್ಸ್‌’ ಬಳಕೆ

ಪಿಟಿಐ
Published 2 ಆಗಸ್ಟ್ 2022, 20:45 IST
Last Updated 2 ಆಗಸ್ಟ್ 2022, 20:45 IST
ಜವಾಹಿರಿ
ಜವಾಹಿರಿ   

ವಾಷಿಂಗ್ಟನ್‌/ಕಾಬೂಲ್‌ : ಅಮೆರಿಕದ ಮೇಲಿನ 9/11 ದಾಳಿಯ ಪ್ರಮುಖ ಸಂಚುಕೋರ, ಅಲ್‌ ಕೈದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯನ್ನು ಭಾನುವಾರ ಬೆಳಿಗ್ಗೆ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಸೋಮವಾರ ಘೋಷಿಸಿದೆ. ಕಾಬೂಲ್‌ನಲ್ಲಿದ್ದ ಈತನನ್ನು ಅಮೆರಿಕವು ಡ್ರೋನ್‌ ದಾಳಿಯ ಮೂಲಕ ಕೊಂದಿದೆ.

ಅಲ್‌ ಕೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್‌ನನ್ನು 2011ರಲ್ಲಿ ಅಮೆರಿಕ ಹತ್ಯೆ ಮಾಡಿತ್ತು. ಆ ಬಳಿಕ, ಅಲ್‌ ಕೈದಾಕ್ಕೆ ಜವಾಹಿರಿ ಹತ್ಯೆಯು ಅತಿ ದೊಡ್ಡ ಹೊಡೆತವಾಗಿದೆ.

ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಕಾರ್ಯಾಚರಣೆಯಲ್ಲಿ ಜವಾಹಿರಿ ಹತನಾಗಿದ್ದಾನೆ.

ADVERTISEMENT

ಜವಾಹಿರಿಗೆ 71 ವರ್ಷ ವಯಸ್ಸಾಗಿತ್ತು. ವೃತ್ತಿಯಲ್ಲಿ ವೈದ್ಯನಾಗಿದ್ದ ಈತ,ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಹುಡುಕುತ್ತಿದ್ದ ಉಗ್ರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಈತನ ಹತ್ಯೆ ಮಾಡಿದವರಿಗೆ 2.5 ಕೋಟಿ ಡಾಲರ್‌ (ಸುಮಾರು ₹200 ಕೋಟಿ) ಬಹುಮಾನ ಘೋಷಿಸಲಾಗಿತ್ತು.

ಭಾರತ ಉಪಖಂಡವನ್ನು ಕೇಂದ್ರೀಕರಿಸಿ ಈತ 2014ರ ಸೆಪ್ಟೆಂಬರ್‌ನಲ್ಲಿ ಪ್ರತ್ಯೇಕ ಘಟಕವೊಂದನ್ನು ಸ್ಥಾಪಿಸಿದ್ದ. ಭಾರತ ಉಪಖಂಡದಲ್ಲಿ ಇಸ್ಲಾಂ ಆಳ್ವಿಕೆ ಸ್ಥಾಪಿಸುವುದು ಇದರ ಗುರಿ ಎಂದು ಜವಾಹಿರಿ ಹೇಳಿದ್ದ.

ಜವಾಹಿರಿಯದ್ದು ಎಂದು ಹೇಳಲಾದ ವಿಡಿಯೊವೊಂದನ್ನು ಏಪ್ರಿಲ್‌ ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಫೆಬ್ರುವರಿಯಲ್ಲಿ ಹಿಜಾಬ್‌ ನಿಷೇಧದ ವಿರುದ್ಧ ಹೋರಾಡಿದ್ದ ವಿದ್ಯಾರ್ಥಿನಿಯನ್ನು ವಿಡಿಯೊದಲ್ಲಿ ಹೊಗಳಲಾಗಿತ್ತು. ಆದರೆ, ವಿದ್ಯಾರ್ಥಿನಿಯ ಕುಟುಂಬವು ಇದು ತಪ್ಪು ಎಂದು ಹೇಳಿತ್ತು ಮತ್ತು ಅದರಿಂದ ಅಂತರ ಕಾಯ್ದುಕೊಂಡಿತ್ತು.

ಹಲವು ವರ್ಷಗಳಿಂದ ಜವಾಹಿರಿ ತಲೆಮರೆಸಿಕೊಂಡಿದ್ದ. ಇತ್ತೀಚೆಗಷ್ಟೇ ಕಾಬೂಲ್‌ಗೆ ಬಂದಿದ್ದ. ಈತನ ಇರುವಿಕೆ ಪತ್ತೆ ಮಾಡಲು ಅಮೆರಿಕ ನಿರಂತರವಾಗಿ ಶ್ರಮಿಸುತ್ತಲೇ ಇತ್ತು.

ನಿಂಜಾ ಬಾಂಬ್‌ ‘ಹೆಲ್‌ಫೈರ್‌ ಆರ್‌9ಎಕ್ಸ್‌’

ಜವಾಹಿರಿಯನ್ನು ಕೊಲ್ಲಲು ಅಮೆರಿಕವು ತನ್ನ ಖ್ಯಾತ ‘ನಿಂಜಾ ಬಾಂಬ್‌’ ಅನ್ನು ಬಳಸಿದೆ. ನಿಂಜಾ ಬಾಂಬ್‌ ಎಂಬುದು ಅದರ ಜನಪ್ರಿಯ ಹೆಸರಾದರೂ, ಅದರ ನಿಜವಾದ ಹೆಸರು ‘ಹೆಲ್‌ಫೈರ್‌ ಆರ್‌9ಎಕ್ಸ್‌’. ವಾಸ್ತವದಲ್ಲಿ ಇದು ಬಾಂಬ್‌ ಅಲ್ಲ, ಬದಲಿಗೆ ಒಂದು ಕ್ಷಿಪಣಿ.

ಹೆಲ್‌ಫೈರ್ ಆರ್9ಎಕ್ಸ್‌ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ಗುರಿ ನಿರ್ದೇಶಿತ ಕ್ಷಿಪಣಿಯಾಗಿದೆ. ಅಂದರೆ ಒಮ್ಮೆ ಗುರಿಯನ್ನು ನಿಗದಿ ಮಾಡಿ, ಉಡಾಯಿಸಿದರೆ ಸಾಕು. ಅದು ಗುರಿಯನ್ನು ಕರಾರುವಾಕ್ಕಾಗಿ ತಲುಪುತ್ತದೆ.

ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆ, ಬಾಂಬ್‌ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ, ಸಿಡಿತಲೆ ಇಲ್ಲದ ಅವತರಣಿಕೆಯನ್ನು ಇಂತಹ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಗುರಿಗೆ ಮಾತ್ರ ಹಾನಿಯಾಗಬೇಕು, ಇತರರಿಗೆ ಹಾನಿಯಾಗಬಾರದು ಎಂಬುದು ಇದರ ಉದ್ದೇಶ. ರಹಸ್ಯ ಕಾರ್ಯಾಚರಣೆಗಳಲ್ಲಿ ಉಗ್ರರನ್ನು ಕೊಲ್ಲಲು ಅಮೆರಿಕವು ಈ ಕ್ಷಿಪಣಿಯನ್ನು ಬಳಸುತ್ತಿದೆ. ಈ ಕ್ಷಿಪಣಿಯನ್ನು ಉಡಾಯಿಸಿದಾಗ ಅದು, ಗುರಿಯನ್ನು ಛೇದಿಸುತ್ತದೆ. ಆದರೆ, ಸ್ಪೋಟಗೊಳ್ಳುವುದಿಲ್ಲ. ಹೀಗಾಗಿ ಸುತ್ತಮುತ್ತಲಿನವರಿಗೆ ಮತ್ತು ಸ್ವತ್ತುಗಳಿಗೆ ಹಾನಿಯಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.