ವಿಶ್ವಸಂಸ್ಥೆ: ಇಸ್ರೇಲ್– ಹಮಾಸ್ ನಡುವೆ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಣೆ ಹಾಗೂ ಹಮಾಸ್‌ನಿಂದ ಒತ್ತೆಯಾಳುಗಳ ಬೇಷರತ್ ಬಿಡುಗಡೆಗೆ ಆಗ್ರಹಪಡಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮತಕ್ಕೆ ಹಾಕಲಾಗಿದ್ದ ನಿರ್ಣಯದ ಅನುಮೋದನೆಯನ್ನು ಅಮೆರಿಕ ತನ್ನ ‘ವಿಟೊ’ ಪರಮಾಧಿಕಾರ ಬಳಸಿ ತಡೆಹಿಡಿದಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಯುಎಇ ಈ ನಿರ್ಣಯ ಮಂಡಿಸಿತ್ತು. 15 ಸದಸ್ಯರ ಭದ್ರತಾ ಮಂಡಳಿಯಲ್ಲಿ 13 ರಾಷ್ಟ್ರಗಳು ಬೆಂಬಲಿಸಿದ್ದವು. ಇಂಗ್ಲೆಂಡ್ ಮತದಾನದಿಂದ ದೂರ ಉಳಿದಿತ್ತು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ವಿಶ್ವಸಂಸ್ಥೆ ನಿಯಮಗಳ ವಿಧಿ 99 ಬಳಸಿ, ನಿರ್ಣಯ ಬೆಂಬಲಿಸಲು ಮನವಿ ಮಾಡಿದ್ದರು. ನಿರ್ಣಯ ಆ ವಲಯದಲ್ಲಿ ಶಾಂತಿ ಸ್ಥಾಪನೆಗೆ ಸಹಕಾರಿ ಎಂದು ಹೇಳಿದ್ದರು.
ಮತದಾನಕ್ಕೂ ಮೊದಲು ‘ತಕ್ಷಣ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಿ, ಜನರನ್ನು ರಕ್ಷಿಸುವ ಹಾಗೂ ಜೀವನಾಧಾರ ಅಗತ್ಯ ವಸ್ತುಗಳ ಪೂರೈಕೆಗೆ ಇರುವ ಯಾವುದೇ ಯತ್ನವನ್ನು ಕೈಬಿಡಬಾರದು ಎಂದು ಕೋರಿದ್ದರು.
ಮತದಾನದ ವೇಳೆ ಮಾತನಾಡಿದ ಅಮೆರಿಕದ ರಾಯಭಾರಿ, ವಿಶೇಷ ರಾಜಕೀಯ ವ್ಯವಹಾರಗಳ ಪ್ರತಿನಿಧಿ ರಾಬರ್ಟ್ ವುಡ್ ಅವರು, ‘ಈ ಕರಡು ನಿರ್ಣಯ ಸಮಗ್ರವಾಗಿಲ್ಲ. ಇಸ್ರೇಲ್‌ನ ಮೇಲೆ ಅ. 7ರಂದು ಹಮಾಸ್ ನಡೆಸಿದ್ದ ದಾಳಿಯನ್ನು ಖಂಡಿಸುವ ಉಲ್ಲೇಖ ಈ ನಿರ್ಣಯದಲ್ಲಿ ಏಕೆ ಮಾಡಿಲ್ಲ’ ಎಂದು ಪ್ರಶ್ನಿಸಿದರು.
‘ತ್ವರಿತ ಪ್ರಕ್ರಿಯೆ ಹಾಗೂ ಸಂಬಂಧಿಸಿದವರ ಜೊತೆಗೆ ಚರ್ಚಿಸದ ಕೊರತೆ ನಡುವೆಯೂ ಈ ಕರಡು ನಿರ್ಣಯ ಕುರಿತು ಅಮೆರಿಕ ಸದ್ಭಾವನೆಯನ್ನೇ ಹೊಂದಿದೆ. ಆದರೆ, ರಚನಾತ್ಮಕ ನಿರ್ಣಯದ ಅಗತ್ಯವಿದೆ ಎಂಬುದು ನಮ್ಮ ನಿಲುವು. ಇದು, ಅಲ್ಲಿ ಅ 7ರಿಂದ ನಾವು ಕೈಗೊಂಡಿರುವ ಜೀವರಕ್ಷಿಸುವ ರಾಜತಾಂತ್ರಿಕತೆಗೆ ಬಲ ನೀಡಬೇಕು. ಮಾನವೀಯ ನೆರವು ನೀಡುವ ಅವಕಾಶ ಹೆಚ್ಚಿಸಬೇಕು. ಒತ್ತೆಯಾಳುಗಳ ಬಿಡುಗಡೆಗೆ ಪ್ರೋತ್ಸಾಹಕವಾಗಿರಬೇಕು’ ಎಂದು ಪ್ರತಿಪಾದಿಸಿದರು.
ದುರದೃಷ್ಟವಶಾತ್ ನಮ್ಮ ಎಲ್ಲ ಶಿಫಾರಸುಗಳನ್ನು ನಿರ್ಣಯದಲ್ಲಿ ಕಡೆಗಣಿಸಲಾಗಿದೆ. ಇದರ ಪರಿಣಾಮವಾಗಿ ಸಮತೋಲನವಿಲ್ಲದ ಈ ಕರಡು ನಿರ್ಣಯವು ವಾಸ್ತವದಿಂದ ವಿಮುಖವಾಗಿದೆ. ಉದ್ದೇಶವನ್ನು ಈಡೇರಿಸುವುದಿಲ್ಲ. ಇದೇ ಕಾರಣದಿಂದ ನಾವು ಈ ನಿರ್ಣಯವನ್ನು ಬೆಂಬಲಿಸುತ್ತಿಲ್ಲ ಎಂದು ಕಾರಣವನ್ನು ವಿವರಿಸಿದರು.
ನಿರ್ಣಯ ಮಂಡಿಸಿದ್ದ ಯುಎಇ ರಾಯಭಾರಿ ಮೊಹಮ್ಮದ್ ಅಬುಸಾಹೇಬ್, ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ಇಂಗ್ಲೆಂಡ್‌ನ ಶಾಶ್ವತ ಪ್ರತಿನಿಧಿ ಬಾರ್ಬರಾ ವುಡ್‌ವರ್ಡ್ ಅವರು, ‘ಹಮಾಸ್‌ನ ದೌರ್ಜನ್ಯ ಖಂಡಿಸದ ಕಾರಣಕ್ಕೆ ನಾವು ಈ ನಿರ್ಣಯವನ್ನು ಬೆಂಬಲಿಸಲಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.