ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ.
ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೆ ಅಗತ್ಯವಿರುವಷ್ಟು ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿಗಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶದಾದ್ಯಂತ ವರ್ಚುವಲ್ ಸ್ವರೂಪದಲ್ಲಿ ನಡೆದ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಕಮಲಾ ಹ್ಯಾರಿಸ್ ಹೆಚ್ಚಿನ ಮತ ಗಳಿಸಿದ್ದು, ಪಕ್ಷದ ಅಭ್ಯರ್ಥಿಯಾಗುವ ಅರ್ಹತೆ ಪಡೆದಿದ್ದಾರೆ ಎಂದು ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ (ಡಿಎನ್‌ಸಿ) ಅಧ್ಯಕ್ಷ ಜೈಮೆ ಹ್ಯಾರಿಸನ್ ಹೇಳಿದ್ದಾರೆ.
‘ನಾವು ನಮ್ಮ ದೇಶವನ್ನು (ಅಮೆರಿಕ) ಪ್ರೀತಿಸುತ್ತೇವೆ. ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿರುವುದು ಸಂತಸ ಮೂಡಿಸಿದೆ. ವರ್ಚುವಲ್ ನಾಮನಿರ್ದೇಶನ ಪ್ರಕ್ರಿಯೆಯ ಅವಧಿ ಮುಗಿದ ನಂತರ ಮುಂದಿನ ವಾರ ನಾಮನಿರ್ದೇಶನವನ್ನು ನಾನು ಅಧಿಕೃತವಾಗಿ ಸ್ವೀಕರಿಸುತ್ತೇನೆ. ದೇಶದ ಜನರನ್ನು ಒಗ್ಗೂಡಿಸುವ ಪ್ರಯತ್ನ ಮುಂದುವರಿಯಲಿದೆ’ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
59 ವರ್ಷದ ಕಮಲಾ ಹ್ಯಾರಿಸ್ ಅವರು ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78) ಅವರನ್ನು ಎದುರಿಸಲಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಅಧಿಕೃತವಾಗಿ ತಾನು ಆಕಾಂಕ್ಷಿ ಎಂದು ಪ್ರಕಟಿಸಿದ್ದರು. ಇದೀಗ ಕಮಲಾ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಘೋಷಿಸಿದೆ.
ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕೆ 3.6 ಲಕ್ಷ ಜನರು ಸ್ವಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಲ್ಲಿ ಕಮಲಾ ಪರವಾಗಿ ತಳಮಟ್ಟದಲ್ಲಿ ಬೆಂಬಲ ಬಲಗೊಳ್ಳುತ್ತಿದೆ ಎಂಬುದನ್ನು ಇದು ಬಿಂಬಿಸುತ್ತಿದೆ.
ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಭಾರತ ಮೂಲದವರಾಗಿದ್ದು, ತಂದೆ ಡೊನಾಲ್ಡ್ ಜಾಸ್ಪರ್ ಹ್ಯಾರಿಸ್ ಅವರು ಜಮೈಕಾದವರಾಗಿದ್ದಾರೆ. ಇಬ್ಬರೂ ಅಮೆರಿಕಕ್ಕೆ ವಲಸೆ ಬಂದವರು.
ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ಈ ಸ್ಥಾನಕ್ಕೆ ಸ್ಪರ್ಧಿಸಲಿರುವ ಭಾರತ–ಅಮೆರಿಕನ್, ಆಫ್ರಿಕನ್–ಅಮೆರಿಕನ್ ಮೂಲದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
2008ರಲ್ಲಿ ಆಫ್ರಿಕನ್–ಅಮೆರಿಕನ್ ಮೂಲದ ಬರಾಕ್ ಒಬಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಆಯ್ಕೆಯಾಗಿದ್ದರು. ಹಿಲರಿ ಕ್ಲಿಂಟನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೊದಲ ಮಹಿಳೆ ಆಗಿದ್ದಾರೆ.
ಒಬಾಮಾ, ಹಿಲರಿ ಕ್ಲಿಂಟನ್ ಮತ್ತು ಕಮಲಾ ಹ್ಯಾರಿಸ್ ಮೂವರೂ ಡೆಮಾಕ್ರಾಟಿಕ್ ಪಕ್ಷದವರು ಎಂಬುದು ಗಮನಾರ್ಹ. ಕಳೆದ 16 ವರ್ಷಗಳಲ್ಲಿ 12 ವರ್ಷ ಇದೇ ಪಕ್ಷ ಅಧಿಕಾರ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.