ಪರಿಣತ ಕೆಲಸಗಾರರಿಗೆ ಅಮೆರಿಕದಲ್ಲಿ ಕೆಲಸ ಮಾಡುವುದಕ್ಕಾಗಿ ನೀಡಲಾಗುವ ಎಚ್1ಬಿ ವೀಸಾ ವ್ಯವಸ್ಥೆಯಲ್ಲಿ ಹಲವು ಲೋಪಗಳು ಇವೆ. ಅವುಗಳಲ್ಲಿ ಮುಖ್ಯವಾದುದು ವೀಸಾ ಅವಧಿ ಮುಗಿದ ಬಳಿಕ ನವೀಕರಣಕ್ಕೆ ಸಂಬಂಧಿಸಿ ಇರುವ ಸಮಸ್ಯೆ. ಮೂರು ವರ್ಷಗಳ ಅವಧಿ ಮುಗಿದ ಬಳಿಕ ವೀಸಾದಾರರು ತಮ್ಮ ದೇಶಕ್ಕೆ ಮರಳಿ ಅಲ್ಲಿರುವ ಕಾನ್ಸಲ್ ಕಚೇರಿಯ ಮೂಲಕವೇ ವೀಸಾವನ್ನು ನವೀಕರಣ ಮಾಡಬೇಕು. ಆದರೆ, ಇದು ಅತ್ಯಂತ ಸುದೀರ್ಘವಾದ ಪ್ರಕ್ರಿಯೆ. ವೀಸಾ ನವೀಕರಣಕ್ಕೆ ಕಾನ್ಸಲ್ ಕಚೇರಿ ಭೇಟಿಗೆ ಸಮಯ ಗೊತ್ತು ಮಾಡುವುದಕ್ಕೇ ಎರಡು ವರ್ಷಗಳವರೆಗೆ ಸಮಯ ತಗಲುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಅಮೆರಿಕದಲ್ಲಿದ್ದುಕೊಂಡೇ ವೀಸಾ ನವೀಕರಣ ಮಾಡುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ವರ್ಷದಲ್ಲಿಯೇ ಇದು ಪ್ರಾಯೋಗಿಕವಾಗಿ ಆರಂಭ ಆಗಬಹುದು ಎನ್ನಲಾಗಿದೆ.
ವೀಸಾ ನವೀಕರಣಕ್ಕೆ ಹೆಚ್ಚು ಸಮಯ ಹಿಡಿಯಲು ಹಲವು ಕಾರಣಗಳಿವೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಅಮೆರಿಕಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಆಗಿರುವ ಏರಿಕೆ ಒಂದು ಕಾರಣ. ಕಾನ್ಸಲ್ ಕಚೇರಿಗಳು ಪ್ರವಾಸಿ ವೀಸಾಗಳ ಮೇಲೆ ಗಮನ ಕೇಂದ್ರೀಕರಿಸಿವೆ. ಕಾನ್ಸಲ್ ಕಚೇರಿಗಳಲ್ಲಿ ಸಿಬ್ಬಂದಿಯ ಕೊರತೆಯೂ ಇದೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸಲ್ಲಿಸಿರುವ ಅರ್ಜಿಗಳ ರಾಶಿಯೇ ಕಾನ್ಸಲ್ ಕಚೇರಿಗಳಲ್ಲಿ ಇವೆ. ಅಮೆರಿಕದ ವೀಸಾ ನೀತಿಯು ಅತ್ಯಂತ ಕಟ್ಟುನಿಟ್ಟಾಗಿ ಇರುವುದರಿಂದ ವೀಸಾ ನೀಡಿಕೆ ಪ‍್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
2004ರ ನಂತರ ವೀಸಾ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇ ಈಗ ಹಲವು ಸಮಸ್ಯೆಗಳು ಸೃಷ್ಟಿಯಾಗಲು ಕಾರಣ. 1990ರಲ್ಲಿ ಎಚ್1ಬಿ ವೀಸಾ ನೀತಿ ಜಾರಿಗೆ ಬಂದಾಗ ವಾರ್ಷಿಕ, 1.95 ಲಕ್ಷ ಮಂದಿಗೆ ವೀಸಾ ನೀಡಲು ನಿರ್ಧರಿಸಲಾಗಿತ್ತು. ಕ್ರಮೇಣ ಇದು ಬದಲಾಯಿತು. ಈಗ ವಾರ್ಷಿಕ 65 ಸಾವಿರ ವೀಸಾಗಳನ್ನು ಮಾತ್ರ ನೀಡಲಾಗುತ್ತಿದೆ. ಅಮೆರಿಕ ದಲ್ಲಿಯೇ ಪದವಿ ಪಡೆದ ವಿದೇಶಿಯರಿಗೆ ಹೆಚ್ಚುವರಿಯಾಗಿ 20 ಸಾವಿರ ವೀಸಾಗಳನ್ನು ನೀಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಲೇ ಇರುವ ಸಂದರ್ಭದಲ್ಲಿ ವೀಸಾ ನೀಡಿಕೆ ಸಂಖ್ಯೆಯನ್ನು ಕಡಿಮೆ ಮಾಡಿರುವುದು ದೊಡ್ಡ ಹೊಡೆತವಾಗಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗದ (ಯುಎಸ್‌ಸಿಐಎಸ್) ಪ್ರಕಾರ, ಅಮೆರಿಕದಲ್ಲಿ ಈಗಿರುವ ಎಚ್1ಬಿ ವೀಸಾದಾರರ ಸಂಖ್ಯೆ 5.65 ಲಕ್ಷ. ಪ್ರತಿ ವರ್ಷವೂ ವೀಸಾಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಏರುತ್ತಲೇ ಇದೆ. ಹಾಗಾಗಿಯೇ, ಈಗ ವೀಸಾ ನೀತಿಯಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ. 2004ರಲ್ಲಿ ಎಚ್1ಬಿ ವೀಸಾಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಖ್ಯೆ 85 ಸಾವಿರ ಮಾತ್ರ ಇತ್ತು. ಆದರೆ, 2023ರಲ್ಲಿ 4,83,927 ಅರ್ಜಿಗಳು ಸಲ್ಲಿಕೆಯಾಗಿವೆ.
ವೀಸಾ ನೀಡಿಕೆ ಕಡಿತಗೊಳಿಸಿರುವುದು ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕ್ಷೇತ್ರವನ್ನು ಹೆಚ್ಚು ಬಾಧಿಸಿದೆ. ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಪ್ರೋಗ್ರಾಮರ್ ಗಳ ಕೊರತೆ ತೀವ್ರವಾಗಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿಯೂ ಕೆಲಸಗಾರರ ಕೊರತೆ ಇದೆ. ಕೃತಕ ಬುದ್ಧಿಮತ್ತೆಯು ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಸಣ್ಣ ಭಾಗವೇ ಆಗಿದ್ದರೂ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಲ್ಲಿ ಶೇ 55ರಷ್ಟು ಮಂದಿ ವಿದೇಶಿಯರೇ ಇದ್ದಾರೆ.
2020ರಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ 69.5ರಷ್ಟು ಕಂಪ್ಯೂಟರ್ ಸಂಬಂಧಿ ಉದ್ಯೋಗಾಕಾಂಕ್ಷಿಗಳದ್ದೇ ಆಗಿತ್ತು ಎಂಬುದು ಈ ಕ್ಷೇತ್ರದಲ್ಲಿ ಈ ವೀಸಾಕ್ಕೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಸೂಚಿಸುತ್ತದೆ.
ನವೀಕರಣ: ಪ್ರತ್ಯೇಕ ಘಟಕಕ್ಕೆ ಸಲಹೆ
ಏಷ್ಯಾ ಅಮೆರಿಕನ್ ಜನರ ಕುರಿತು ರಚಿಸಲಾಗಿರುವ ಅಮೆರಿಕ ಅಧ್ಯಕ್ಷರ ಸಲಹಾ ಆಯೋಗದ ಶಿಫಾರಸಿನಂತೆ ವೀಸಾ ನವೀಕರಣ ವ್ಯವಸ್ಥೆಯಲ್ಲಿ ಬದಲಾವಣೆಗೆ ನಿರ್ಧರಿಸಲಾಗಿದೆ. ಎಚ್1ಬಿ ಮತ್ತು ಎಲ್ ವೀಸಾಗಳ ನವೀಕರಣಕ್ಕೆ ಪ್ರತ್ಯೇಕ ಇಲಾಖೆಯನ್ನೇ ರೂಪಿಸಬೇಕು ಎಂದೂ ಯುಎಸ್‌ಸಿಐಎಸ್‌ಗೆ ಸಲಹೆ ನೀಡಿದೆ.
ವೀಸಾ ನವೀಕರಣದ ಇಡೀ ಪ್ರಕ್ರಿಯೆಯು ಅತ್ಯಂತ ತ್ರಾಸದಾಯಕವಾಗಿದೆ. ಇಲ್ಲಿ ಕೆಲಸ ಮಾಡುವುದಕ್ಕಾಗಿ ಇಲ್ಲಿನ ಕಂಪನಿಗಳ ಆಹ್ವಾನದ ಮೇರೆಗೆ ಕಾನೂನುಬದ್ಧವಾಗಿ ಅಮೆರಿಕಕ್ಕೆ ಬರುವವರಿಗೆ ತೊಂದರೆ ಕೊಡುವ ರೀತಿಯಲ್ಲಿ ಈ ವ್ಯವಸ್ಥೆ ಇದೆ. ಹೀಗೆ ಬಂದವರು ಅಮೆರಿಕದ ಕಂಪನಿಗಳು ಮತ್ತು ಅರ್ಥವ್ಯವಸ್ಥೆಗೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಆಯೋಗವು ಅಮೆರಿಕದ ಅಧ್ಯಕ್ಷರಿಗೆ ಸಲ್ಲಿಸಿದ ಶಿಫಾರಸಿನಲ್ಲಿ ಹೇಳಿದೆ.
ವೀಸಾ: ಹತ್ತಾರು ವಿಧ
ದೇಶಕ್ಕೆ ಭೇಟಿ ನೀಡುವ ವಿದೇಶಿಯರಿಗೆ ಅಮೆರಿಕವು ಹತ್ತಾರು ರೀತಿಯ ವೀಸಾಗಳನ್ನು ಒದಗಿಸುತ್ತದೆ. ಯಾವ ಉದ್ದೇಶಕ್ಕೆ ಭೇಟಿ ನೀಡುತ್ತಾರೆ ಎಂಬುದರ ಮೇಲೆ ಯಾವ ವೀಸಾ ಎಂದು ನಿರ್ಧರಿಸಲಾಗುತ್ತದೆ. ತಾತ್ಕಾಲಿಕ ವೀಸಾ, ಕಾಯಂ ವೀಸಾ, ವಿದ್ಯಾರ್ಥಿ ವೀಸಾ ಮತ್ತು ವ್ಯಾಪಾರದ ಉದ್ದೇಶಕ್ಕೆ ಭೇಟಿ ನೀಡಲು ವೀಸಾ ನೀಡಲಾಗುತ್ತದೆ. ಅಮೆರಿಕದಲ್ಲಿ ನಿಗದಿತ ಅವಧಿವರೆಗೆ ಉದ್ಯೋಗ ಮಾಡಲು ಬಯಸುವ ವಿದೇಶಿ ನೌಕರರಿಗೆ ತಾತ್ಕಾಲಿಕ ವೀಸಾ ನೀಡಲಾಗುತ್ತದೆ. ಉದ್ಯೋಗಿಯ ಸಂಗಾತಿ ಅಥವಾ ಅವಲಂಬಿತರಿಗೂ ವೀಸಾ ನೀಡಲಾಗುತ್ತದೆ. ಉದ್ಯೋಗಿಗಳ ಪರವಾಗಿ ಉದ್ಯೋಗದಾತ ಸಂಸ್ಥೆಯು ವೀಸಾಕ್ಕೆ ಅರ್ಜಿ ಸಲ್ಲಿಸಬೇಕು.
ಎಚ್1ಬಿ: ಎಚ್ ವರ್ಗದ ವೀಸಾಗಳಲ್ಲಿ ಎಚ್1ಬಿ ವೀಸಾ ಪ್ರಮುಖವಾದುದು. ವಿದೇಶಗಳ ನುರಿತ ತಂತ್ರಜ್ಞರು, ಶೈಕ್ಷಣಿಕ ವಲಯದ ವೃತ್ತಿಪರರು, ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ವಿಶೇಷ ಪರಿಣತಿ ಇರುವವರಿಗೆ ಈ ವೀಸಾ ಸಿಗುತ್ತದೆ. ಉದ್ಯೋಗಕ್ಕೆ ಬೇಕಾದಷ್ಟು ಅಥವಾ ಅದಕ್ಕೂ ಹೆಚ್ಚಿನ ದರ್ಜೆಯ ಪದವಿ ಪಡೆದಿರಬೇಕು. ಅಮೆರಿಕದ ಉದ್ಯೋಗದಾತ ಸಂಸ್ಥೆಯು ಉದ್ಯೋಗಿಯ ಪರವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತದೆ. ಈ ಕೆಲಸವನ್ನು ಮಾಡಬಲ್ಲ ಕೌಶಲದ ಉದ್ಯೋಗಿಗಳು ಅಮೆರಿಕದಲ್ಲಿ ಇಲ್ಲ ಎಂಬುದನ್ನು ಕಂಪನಿಯು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಎಚ್1ಬಿ ವೀಸಾ ಅವಧಿ 3 ವರ್ಷ.
ಎಚ್–2ಎ ಮತ್ತು ಎಚ್–2ಬಿ: ನಿರ್ದಿಷ್ಟ ಋತುವೊಂದರಲ್ಲಿ ಕೆಲಸದ ಒತ್ತಡ ಹೆಚ್ಚಿದ ಸಂದರ್ಭದಲ್ಲಿ ಈ ಎರಡು ರೀತಿಯ ತಾತ್ಕಾಲಿಕ ವೀಸಾಗಳನ್ನು ನೀಡಲಾಗುತ್ತದೆ. ಕೃಷಿ ಸಂಬಂಧಿತ ಕೆಲಸಗಳಿಗೆ ಎಚ್–2ಎ ಮತ್ತು ಕೃಷಿಯೇತರ ಕೆಲಸದ ಸಂದರ್ಭಗಳಲ್ಲಿ ಎಚ್–2ಬಿ ನೀಡಲಾಗುತ್ತದೆ. ಒಂದು ವರ್ಷದ ಒಳಗೆ ಇವುಗಳ ಅವಧಿ ಮುಗಿಯುತ್ತದೆ.
ಎಚ್–3: ವೈದ್ಯಕೀಯ ಶಿಕ್ಷಣ ಹೊರತುಪಡಿಸಿ, ಬೇರಾವುದೇ ವಿಶೇಷ ಶಿಕ್ಷಣ, ತರಬೇತಿ ಪಡೆಯುವ ಉದ್ದೇಶಕ್ಕೆ ಈ ರೀತಿಯ ವೀಸಾ ನೀಡಲಾಗುತ್ತದೆ. ಈ ವೀಸಾದಡಿ ತರಬೇತಿ ಪಡೆಯುವವರಿಗೆ, ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ಇರುವುದಿಲ್ಲ.
ಎಚ್–4: ಎಚ್–1 ಬಿ ಹಾಗೂ ಎಚ್–2ಎ ವೀಸಾ ಪಡೆದಿರುವ ಉದ್ಯೋಗಿಗಳ ಸಂಗಾತಿ, ಪೋಷಕರು ಅಥವಾ ಅವರ 21 ವರ್ಷದೊಳಗಿನ ಮಕ್ಕಳಿಗೆ ಅಮೆರಿಕದಲ್ಲಿ ವಾಸಿಸಲು ಎಚ್–4 ವೀಸಾ ನೀಡಲಾಗುತ್ತದೆ.
ಎಲ್–1ಎ ಮತ್ತು ಎಲ್–1 ಬಿ: ಕೆಲಸ ಮಾಡುವ ಕಂಪನಿಯೊಳಗೆ ತಾತ್ಕಾಲಿಕವಾಗಿ ವರ್ಗಾವಣೆ ಆಗುವ ಉದ್ಯೋಗಿಗಳಿಗೆ ಇವುಗಳನ್ನು ನೀಡಲಾಗುತ್ತದೆ. ಕಾರ್ಯನಿರ್ವಹಣಾ ಅಥವಾ ನಿರ್ವಹಣಾ ಶ್ರೇಣಿಯ ಉದ್ಯೋಗಿಗಳಿಗೆ ಎಲ್–1ಎ ವೀಸಾವನ್ನು 3 ವರ್ಷಗಳ ಅವಧಿಗೂ, ವಿಶೇಷ ಪರಿಣತಿಯ ಶ್ರೇಣಿಯ ಉದ್ಯೋಗಿಗೆ ಎಲ್–1 ಬಿ ವೀಸಾವನ್ನು ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ.
ಐ ವೀಸಾ: ಇದೊಂದು ಮಾಧ್ಯಮ ವೀಸಾ. ವಿದೇಶಗಳಲ್ಲಿ ಮುದ್ರಣ ಮಾಧ್ಯಮ, ರೇಡಿಯೊ, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ವರದಿಗಾರರು, ಸಂಪಾದಕರು ಅಥವಾ ಸಿನಿಮಾ ತಂಡದ ಸಿಬ್ಬಂದಿಗೆ ಈ ವೀಸಾ ಮೀಸಲಾಗಿದೆ. ಈ ವೀಸಾಗೆ ಇಂತಿಷ್ಟೇ ಅವಧಿ ಎಂದು ನಿಗದಿಯಿಲ್ಲ.
ಒ–ವೀಸಾ: ಅಸಾಧಾರಣ ಸಾಮರ್ಥ್ಯ ಮತ್ತು ಅಸಾಧಾರಣ ಸಾಧನೆ ಮಾಡಿರುವ ಜನರಿಗೆ ಒ–ವೀಸಾ ಸಿಗುತ್ತದೆ. ಇಂತಹ ವ್ಯಕ್ತಿಗಳ ಜೊತೆ ಪ್ರಯಾಣಿಸುವ ಕುಟುಂಬದವರಿಗೂ ವೀಸಾ ಸಿಗುತ್ತದೆ.
ಪಿ–ವೀಸಾ: ಕಾರ್ಯಕ್ರಮ ಆಧಾರಿತ ವೀಸಾ ಇದಾಗಿದ್ದು, ಅಥ್ಲೆಟಿಕ್ಸ್, ಪ್ರದರ್ಶನ, ವಿವಿಧ ಕಲೆಗಳಲ್ಲಿ ಅನುಪಮ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಇದು ಮೀಸಲು.
ಆರ್–ವೀಸಾ: ಧಾರ್ಮಿಕ ಪಂಗಡವೊಂದಕ್ಕೆ ಸೇರಿರುವ ಹಾಗೂ ಧಾರ್ಮಿಕ ಕೆಲಸಕ್ಕಾಗಿ ಅಮೆರಿಕಕ್ಕೆ ಭೇಟಿ ನೀಡುವ ವ್ಯಕ್ತಿಗೆ ಆರ್–ವೀಸಾ ನೀಡಲಾಗುತ್ತದೆ.
ವಿದ್ಯಾರ್ಥಿ ವೀಸಾ: ಅಮೆರಿಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಡಿ ದೇಶಕ್ಕೆ ಬರಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ವೀಸಾ ನೀಡಲಾಗುತ್ತದೆ. ಇದರಡಿ, ಎಫ್–1 ವೀಸಾ ಪಡೆಯುವ ವಿದ್ಯಾರ್ಥಿಯು, ಒಂದು ವರ್ಷದ ಬಳಿಕ ತನ್ನ ವಿದ್ಯಾಭ್ಯಾಸದ ಜತೆಗೆ ಉದ್ಯೋಗವನ್ನೂ ಮಾಡಬಹುದು. ವಿದ್ಯಾರ್ಥಿಯ ಕುಟುಂಬದವರಿಗೆ ಎಫ್–2 ವೀಸಾ ಸಿಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂ–ವೀಸಾ, ಜೆ–ವೀಸಾ ವ್ಯವಸ್ಥೆಗಳೂ ಇವೆ.
ವ್ಯವಹಾರ ವೀಸಾ: ತಾತ್ಕಾಲಿಕವಾಗಿ, ವ್ಯವಹಾರವೊಂದರ ಸಲುವಾಗಿ ಅಮೆರಿಕಕ್ಕೆ ಭೇಟಿ ನೀಡುವ ಉದ್ಯಮಿಗಳಿಗೆ ಬಿ–1 ಹೆಸರಿನ ವೀಸಾ ಇದೆ. ಬಿ–1 ವೀಸಾದಾರರ ಕುಟುಂಬದವರಿಗೆ ಅವರ ಜೊತೆ ಪ್ರಯಾಣಿಸಲು ಅವಕಾಶವಿಲ್ಲ.
ಗ್ರೀನ್ ಕಾರ್ಡ್
ಪರಿಣತ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ‘ಗ್ರೀನ್ ಕಾರ್ಡ್’ ನೀಡಲಾಗುತ್ತದೆ. ಅಮೆರಿಕ ಪ್ರತಿ ವರ್ಷ 1.40 ಲಕ್ಷ ಗ್ರೀನ್ ಕಾರ್ಡ್‌ಗಳನ್ನು ಉದ್ಯೋಗ ಆಧಾರಿತವಾಗಿ ನೀಡುತ್ತದೆ. ಅಮೆರಿಕದಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ನೌಕರರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
ವೃತ್ತಿ ಆಧಾರಿತ ಇನ್ನಷ್ಟು ವೀಸಾಗಳನ್ನು ಅಮೆರಿಕ ನೀಡುತ್ತದೆ. ವಾಣಿಜ್ಯ ವೃತ್ತಿಪರರು, ಶಿಕ್ಷಣ ಹಾಗೂ ಸಂಶೋಧನೆ, ವಿಜ್ಞಾನ, ಕಲೆಯಲ್ಲಿ ಅಪಾರ ಪರಿಣತಿ ಪಡೆದಿರುವವರಿಗೆ ಮೊದಲ ಪ್ರಾಶಸ್ತ್ಯದ ಇಬಿ–1 ವೀಸಾ ನೀಡಲಾಗುತ್ತದೆ. ಕನಿಷ್ಠ 10 ವರ್ಷಗಳ ಅನುಭವ ಇರುವ ವೃತ್ತಿಪರರಿಗೆ ಎರಡನೇ ಪ್ರಾಶಸ್ತ್ಯದ ಇಬಿ–2 ವೀಸಾ ಇದೆ. ಅಮೆರಿಕದ ಕಂಪನಿಯೊಂದಕ್ಕೆ ತಾತ್ಕಾಲಿಕವಾಗಿ ಅಗತ್ಯವಿರುವ ಕಾರ್ಮಿಕರ ನೇಮಕಕ್ಕೆ ಇಬಿ–3 ವೀಸಾ ಮೀಸಲಾಗಿದೆ. ಹಾಗೆಯೇ ಉದ್ಯೋಗ ಆಧಾರಿತವಾದ ಇಬಿ–4 ಮತ್ತು ಇಬಿ–5 ಎಂಬ ವೀಸಾಗಳನ್ನೂ ಅಮೆರಿಕ ಪರಿಚಯಿಸಿದೆ.
ತಂತ್ರಜ್ಞಾನ ಕಂಪನಿಗಳೇ ಮುಂದು
ಅಮೆರಿಕ ನೀಡುವ ಉದ್ಯೋಗ ಆಧಾರಿತ, ಪ್ರತಿಷ್ಠಿತ ಎಚ್–1ಬಿ ವೀಸಾ ಪಡೆಯುವಲ್ಲಿ ತಂತ್ರಜ್ಞಾನ ಕಂಪನಿಗಳೇ ಮುಂಚೂಣಿಯಲ್ಲಿವೆ. ಅಮೆಜಾನ್, ಇನ್ಫೊಸಿಸ್ ಹಾಗೂ ಟಿಸಿಎಸ್ ಕಂಪನಿಗಳು ಅತಿಹೆಚ್ಚು ವೀಸಾ ಪಡೆದ ಮೊದಲ ಮೂರು ಸ್ಥಾನಗಳಲ್ಲಿವೆ. 2022ರಲ್ಲಿ ಅಮೆಜಾನ್ ಕಂಪನಿಯು 6,396 ಎಚ್–1ಬಿ ವೀಸಾಗಳಿಗೆ ಅರ್ಜಿ ಹಾಕಿತ್ತು. ಇನ್ಫೊಸಿಸ್ 3,151 ಉದ್ಯೋಗಿಗಳಿಗೆ ಈ ವೀಸಾ ಕೊಡಿಸುವಲ್ಲಿ ಯಶಸ್ವಿಯಾಗಿತ್ತು. ಟಿಸಿಎಸ್ ಕಂಪನಿಯು 2,725 ವೀಸಾ ಪಡೆದಿತ್ತು. ಕಾಗ್ನಿಜೆಂಟ್, ಗೂಗಲ್, ಮೆಟಾ, ಎಚ್‌ಸಿಎಲ್ ಹಾಗೂ ಐಬಿಎಂ ನಂತರದ ಸ್ಥಾನಗಳಲ್ಲಿವೆ.
ಆಧಾರ: ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗದ ಜಾಲತಾಣ, ಪಿಟಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.