ವಾಷಿಂಗ್ಟನ್ (ಎಎಫ್‌ಪಿ/ಪಿಟಿಐ): ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಬುಧವಾರ ಹೊರಬಂದಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೂಟಾಟಿಕೆಯನ್ನು ಖಂಡಿಸಿರುವ ಅಮೆರಿಕ, ಇಂತಹ ಮನಸ್ಥಿತಿ ಹೊಂದಿರುವ ದೇಶಗಳಿಂದ ಇನ್ನು ಮುಂದೆ ಭಾಷಣ ಕೇಳುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ.
ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕಿ ಹ್ಯಾಲೆ ಅವರು ಈ ನಿರ್ಧಾರ ಪ್ರಕಟಿಸಿದರು. ಇಸ್ರೇಲ್ ಮೇಲೆ ಅತಿಯಾಗಿ ಗಮನ ಕೇಂದ್ರೀಕರಿಸುವುದು ಹಾಗೂ ನಿರಂತರವಾಗಿ ಅದನ್ನು ವಿರೋಧಿಸುವ ಮಂಡಳಿಯ ನಿಲುವನ್ನು ನಿಕಿ ಖಂಡಿಸಿದ್ದಾರೆ.
ಮಾನವ ಹಕ್ಕುಗಳ ಸಮಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಸೇವೆಯಲ್ಲಿ ಮುಂದುವರಿದಿದ್ದಾರೆ. ಜೊತೆಗೆ ಸಮಿತಿಗೆ ನೇಮಕಗೊಳ್ಳುತ್ತಲೇ ಇದ್ದಾರೆ ಎಂದು ಅವರು ದೂರಿದ್ದಾರೆ.
ಜಗತ್ತಿನಲ್ಲಿ ಅಮಾನವೀಯ ಆಡಳಿತ ನೀಡಿದವರು ಪರಿಶೀಲನೆ ವೇಳೆ ತಪ್ಪಿಸಿಕೊಳ್ಳುತ್ತಿದ್ದಾರೆ. ಆದರೆ ಮಾನವ ಹಕ್ಕುಗಳ ಬಗ್ಗೆ ಉತ್ತಮ ನಡವಳಿಕೆಯ ತೋರಿದ ದೇಶಗಳನ್ನು ರಾಜಕೀಯವಾಗಿ ಬಲಿಪಶು ಮಾಡಲಾಗುತ್ತಿದೆ ಎಂದು ನಿಕಿ ಆರೋಪಿಸಿದ್ದಾರೆ.
‘ಈ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಮಂಡಳಿಯಿಂದ ಹೊರಬರುತ್ತಿದ್ದೇವೆ’ ಎಂದು ನಿರ್ಧಾರ ಪ್ರಕಟಿಸಿದ್ದಾರೆ.
ಮಾನವ ಹಕ್ಕುಗಳನ್ನು ಕಾಪಾಡುವ ಅಮೆರಿಕದ ಬದ್ಧತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ನಿಕಿಸುದ್ದಿಗೋಷ್ಠಿಯಲ್ಲಿ ಸ್ಪಷ್ಟಡಿಸಿದ್ದಾರೆ.
ಅಮೆರಿಕದ ನಡೆಗೆ ಕಾರಣ ಏನು?
ಮೆಕ್ಸಿಕೊ ಗಡಿ ದಾಟಿ ಅಮೆರಿಕದ ಆಶ್ರಯ ಬಯಸಿ ಬರುತ್ತಿರುವ ಜನರ ಪೈಕಿ ಹೆತ್ತವರನ್ನು ಅವರ ಮಕ್ಕಳಿಂದ ಬೇರ್ಪಡಿಸುತ್ತಿರುವ ಕ್ರಮವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳು ಟೀಕಿಸಿದ್ದರು. ಹೀಗಾಗಿ ಮಂಡಳಿಯನ್ನೇ ತೊರೆಯುವ ನಿರ್ಧಾರವನ್ನು ಅಮೆರಿಕ ಪ್ರಕಟಿಸಿದೆ.
ಸಂಘಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸದಸ್ಯ ರಾಷ್ಟ್ರಗಳನ್ನು ವಜಾಗೊಳಿಸುವುದು ಹಾಗೂ ಮಂಡಳಿಯಲ್ಲಿ ಸುಧಾರಣೆ ತರಲು ಮಾಡಿದ ಸುದೀರ್ಘ ಯತ್ನಗಳು ವಿಫಲಗೊಂಡ ಕಾರಣ ಅಮೆರಿಕ ಈ ನಿರ್ಧಾರಕ್ಕೆ ಬಂದಿದೆ.
ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡಲು ಸುಧಾರಣೆ ಅತ್ಯಂತ ತುರ್ತಿನ ಕೆಲಸವಾಗಿತ್ತು. ಆದರೆ ಅದು ಕೈಗೂಡಲಿಲ್ಲ ಎಂದು ನಿಕಿ ಹ್ಯಾಲೆ ಹೇಳಿದ್ದಾರೆ.
ಪ್ಯಾಲೆಸ್ಟೀನ್ ವಿಚಾರದಲ್ಲಿ ಇಸ್ರೇಲ್ ನಡವಳಿಕೆ ಮೇಲೆ ಮಂಡಳಿಯು ಹೆಚ್ಚು ಗಮನ ಕೇಂದ್ರೀಕರಿಸುತ್ತಿದೆ ಎಂಬುದೂ ಅಮೆರಿಕದ ಈ ನಿರ್ಧಾರಕ್ಕೆ ಒಂದು ಕಾರಣ.ಇಸ್ರೇಲ್ ಬಗ್ಗೆ ಪಕ್ಷಪಾತ ಧೋರಣೆ ತಳೆದಿರುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.
ಮಂಡಳಿ ಸ್ಥಾಪನೆಯಾದಂದಿನಿಂದ ಇಸ್ರೇಲ್ ನಿಲುವು ಖಂಡಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.ಒಂದು ವರ್ಷದ ಹಿಂದೆಯೇ ನಿಕಿ ಅವರು ಈ ಬಗ್ಗೆ ಸುಳಿವು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.