ವಾಷಿಂಗ್ಟನ್ : ಅತಿ ಉದ್ದನೆಯ ಗಡ್ಡ ಬೆಳೆಸುವ ಮೂಲಕ ಅಮೆರಿಕದ ಮಿಚಿಗನ್‌ನ ಮಹಿಳೆ ಎರಿನ್ ಹನಿಕಟ್ ವಿಶ್ವ ದಾಖಲೆ ಬರೆದಿದ್ದಾರೆ.
11.8 ಇಂಚು (29.9 cm) ಉದ್ದದ ಗಡ್ಡವನ್ನು ಸುಮಾರು ಎರಡು ವರ್ಷಗಳಿಂದ ಬೆಳಸುತ್ತಿರುವ ಎರಿನ್, 75 ವರ್ಷದ ವಿವಿಯನ್ ವೀಲರ್ (25.5 ಸೆ.ಮಿ) ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ತಿಳಿಸಿದೆ.
ಸಾಮಾನ್ಯವಾಗಿ ಮಹಿಳೆಯರಲ್ಲಿ ಗಡ್ಡ ಬೆಳೆಯುವುದಿಲ್ಲ. ಎರಿನ್ ಅವರಿಗೆ ಹಾರ್ಮೋನ್ ಸಮಸ್ಯೆಯಿದ್ದು, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್‌ನಿಂದ ಅವರ ಮುಖದಲ್ಲಿ ಕೂದಲು ಬೆಳೆಯಲು ಪ್ರಾರಂಭವಾಗಿತ್ತು. ಇದರಿಂದ ಆತಂಕಗೊಂಡ ಅವರು ಕೂದಲು ಬೆಳೆಯುವುದನ್ನು ನಿಲ್ಲಿಸಲು ಹಲವು ಪ್ರಯತ್ನ ಮಾಡಿದ್ದರು. ಶೇವಿಂಗ್, ವ್ಯಾಕ್ಸಿಂಗ್‌ನ ಮೊರೆ ಹೋಗಿದ್ದರು.
‘ನಾನು 13 ವರ್ಷದವಳಿದ್ದಾಗ ನನಗೆ ಹಾರ್ಮೋನ್ ಸಮಸ್ಯೆ ಕಾಣಿಸಿಕೊಂಡಿತ್ತು. ದಿನಕ್ಕೆ ಮೂರು ಬಾರಿ ಶೇವ್ ಮಾಡುವ ಮೂಲಕ ಮುಖದಲ್ಲಿನ ಕೂದಲನ್ನು ತೆಗೆಯುತ್ತಿದ್ದೆ. ಈ ಸಮಯದಲ್ಲಿ ಅತೀ ಹೆಚ್ಚು ಮಾನಸಿಕ ಒತ್ತಡ ಅನುಭವಿಸಿದ್ದೆ‘ ಎಂದು ಎರಿನ್ ಹೇಳಿಕೊಂಡಿದ್ದಾರೆ.
‘ಕೋವಿಡ್ ಸಮಯದಲ್ಲಿ ಐ ಸ್ಟ್ರೋಕ್ ಆಗಿದ್ದು, ಕಣ್ಣಿನ ದೃಷ್ಠಿ ಕಳೆದುಕೊಂಡೆ. ಇದು ನನ್ನನ್ನು ಇನ್ನಷ್ಟು ಜರ್ಜರಿತವಾಗಿ ಮಾಡಿತ್ತು. ದೃಷ್ಟಿ ಕಳೆದುಕೊಂಡ ಮೇಲೆ ನಾನು ಶೇವ್ ಮಾಡುವುದನ್ನೇ ನಿಲ್ಲಿಸಿಬಿಟ್ಟೆ. ಕೋವಿಡ್ ಸಮಯದಲ್ಲಿ ನಾನು ಒಂದು ಬಾರಿಯೂ ಶೇವ್ ಮಾಡಲಿಲ್ಲ‘ ಎಂದು ಹೇಳಿದರು.
‘ನಾನು ನನ್ನ ಗಡ್ಡದ ಮೂಲಕ ದಾಖಲೆ ಬರೆಯುತ್ತೇನೆ ಎಂದುಕೊಂಡಿರಲಿಲ್ಲ. ನನ್ನನ್ನು ಗುರುತಿಸಿರುವುದಕ್ಕೆ ಖುಷಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.