ವಾಷಿಂಗ್ಟನ್ (ಪಿಟಿಐ): ‘ಭಾರತದಲ್ಲಿ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಉಲ್ಲಂಘನೆ ಕುರಿತಂತೆ ಸೆಪ್ಟೆಂಬರ್ 20ರಂದು ವಿಚಾರಣೆ ನಡೆಸಲಾಗುವುದು’ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್) ಪ್ರಕಟಿಸಿದೆ.
ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಭಾರತದ ಸರ್ಕಾರದ ಜೊತೆಗೂಡಿ ಅಮೆರಿಕವು ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಕುರಿತು ವಿಚಾರಣೆ ನಡೆಯಲಿದೆ ಎಂದು ತಿಳಿಸಿದೆ.
ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನು ಈ ಹಿಂದೆ ಭಾರತ ತಳ್ಳಿಹಾಕಿತ್ತು. ಮೇ 2ರಂದು ನೀಡಿದ್ದ ಹೇಳಿಕೆಯಲ್ಲಿ ‘ಇದು ಪಕ್ಷಪಾತತನದ ಹಾಗೂ ಉದ್ದೇಶಪೂರ್ವಕವಾದ ಹೇಳಿಕೆಯಾಗಿದೆ’ ಎಂದು ಭಾರತ ಪ್ರತಿಕ್ರಿಯಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರು ಕಳೆದ ಜೂನ್ ತಿಂಗಳಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇತ್ತೀಚೆಗೆ ಜಿ20 ಶೃಂಗಸಭೆಯಲ್ಲೂ ಭೇಟಿಯಾಗಿದ್ದರು. ಅದರ ಹಿಂದೆಯೇ ಈ ತೀರ್ಮಾನ ಹೊರಬಿದ್ದಿರುವುದು ಗಮನಾರ್ಹ.
ಅಲ್ಪಸಂಖ್ಯಾತರ ವಿಷಯಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಕಾರ್ಯಕಲಾಪ ವರದಿಗಾರ ಫೆರ್ನಾಂಡ್ ಡೆ ವೆರೆನ್ನಾಸ್, ಅಮೆರಿಕ ಸಂಸತ್ತಿನ ಕಾನೂನು ಗ್ರಂಥಾಲಯದ ವಿದೇಶ ಕಾಯ್ದೆಗಳ ಪರಿಣತ ತಾರೀಕ್ ಅಹ್ಮದ್, ಹ್ಯೂಮನ್ ರೈಟ್ಸ್ ವಾಚ್ ಸಂಘಟನೆಯ ವಾಷಿಂಗ್ಟ್‌ನ ನಿರ್ದೇಶಕ ಸಾರಾ ಯಾಗಿರ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸುನಿತಾ ವಿಶ್ವನಾಥ್, ಜಾರ್ಜ್‌ಟೌನ್ ಯುನಿವರ್ಸಿಟಿಯ ಪ್ರೊ. ಹಮದ್ ಬಿನ್ ಖಾಲಿಫಾ ಅಲ್ ಥಾನಿ ಅವರನ್ನು ಆಹ್ವಾನಿಸಲಾಗಿದೆ.
‘ಕಳೆದ ಒಂದು ದಶಕದಲ್ಲಿ ಭಾರತ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ತಾರತಮ್ಯವಾದ ನೀತಿಯನ್ನು ರೂಪಿಸಿ, ಜಾರಿಗೊಳಿಸಿದೆ. ಇದರಲ್ಲಿ ಮತಾಂತರ ತಡೆ ಕಾಯ್ದೆ, ಗೋವು ಹತ್ಯೆ ನಿಯಂತ್ರಣ ಕಾಯ್ದೆ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು, ನಾಗರಿಕ ಸಂಘಟನೆಗಳು ವಿದೇಶಿ ದೇಣಿಗೆ ಪಡೆಯಲು ಕಡಿವಾಣ ಸೇರಿವೆ’ ಎಂದು ಯುಎಸ್‌ಸಿಐಆರ್‌ಎಫ್ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಹರಿಯಾಣದಲ್ಲಿ ಹಿಂದೂ–ಮುಸ್ಲಿಂರ ನಡುವೆ ಸಂಘರ್ಷ ನಡೆದಿದೆ. ಮಣಿಪುರದಲ್ಲಿ ಕ್ರೈಸ್ತ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆದಿವೆ. ಈ ಎಲ್ಲವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯವನ್ನು ತಡೆಯಲು ಹೊಸ ಕಾರ್ಯತಂತ್ರ ಅಗತ್ಯವಾಗಿದೆ ಎಂಬುದನ್ನು ಪುಷ್ಠಿಕರಿಸಲಿದೆ ಎಂದು ಯುಎಸ್‌ಸಿಐಆರ್‌ಎಫ್ ಪ್ರತಿಪಾದಿಸಿದೆ.
ಭಾರತದಲ್ಲಿ ವ್ಯವಸ್ಥಿತವಾಗಿ, ನಿರಂತರವಾಗಿ ಮತ್ತು ತೀವ್ರ ಪ್ರಮಾಣದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಇದು, ವಿಶೇಷವಾಗಿ ಗಮನಿಸಬೇಕಾದ ದೇಶವಾಗಿದೆ ಎಂದು ಯುಎಸ್‌ಸಿಐಆರ್‌ಎಫ್ 2020ರಿಂದಲೂ ಶಿಫಾರಸು ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.