ಫ್ರೀಟೌನ್: ಭಾರತ ಮತ್ತು ಸಿಯೇರ ಲಿಯೋನ್ ದೇಶಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಹಾಗೂ ಭಯೋತ್ಪಾದನೆ ಹತ್ತಿಕ್ಕಲು ಒಟ್ಟಾಗಿ ಕೈಜೋಡಿಸಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಭಾನುವಾರ ಇಲ್ಲಿ ಹೇಳಿದರು.
ಸಿಯೇರ ಲಿಯೋನ್ ಅಧ್ಯಕ್ಷ ಜೂಲಿಯಸ್ ಮಾಡ ಬಿಯೊ ಜತೆಗಿನ ಮಾತುಕತೆ ನಂತರ ನಡೆದ ಸಭೆಯಲ್ಲಿ ನಾಯ್ಡು ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪುನರ್ ವಿಂಗಡಿಸಿ ಎರಡು ಕೇಂದ್ರ ಆಡಳಿತ ಪ್ರದೇಶಗಳಾಗಿಸಿರುವುದು ದೇಶದ ಆಂತರಿಕ ಸಂಗತಿ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಉದ್ದೇಶದಿಂದ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ. ಇದರಿಂದ ಬಾಹ್ಯ ಗಡಿಭಾಗದ ಮೇಲೆ ಯಾವುದೇ ಪರಿಣಾಮವಾಗದು ಎಂದು ಪ್ರತಿಪಾದಿಸಿದರು.
ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಸಿಯೇರ ಲಿಯೋನ್ ದೇಶದ ಅಂಗವಿಕಲರಿಗೆ ಕೃತಕ ಕಾಲು ಜೋಡಿಸುವ ಶಿಬಿರ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಿಯೇರ ಲಿಯೋನ್‌ನಲ್ಲಿ ಹೈಕಮಿಷನರ್ ಕಚೇರಿಯನ್ನು ಪ್ರಾರಂಭಿಸುವುದಾಗಿ ಉಪ ರಾಷ್ಟ್ರಪತಿ ಅವರು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.