ಹೋ ಚಿ ಮಿನ್ ಸಿಟಿ : ವಿಯೆಟ್ನಾಂನ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವೆನಿಸಿದ ₹2.25 ಲಕ್ಷ ಕೋಟಿ (27 ಶತಕೋಟಿ ಡಾಲರ್) ವಂಚನೆ ಪ್ರಕರಣದಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಮಹಿಳಾ ಉದ್ಯಮಿ ಟ್ರೂಂಗ್ ಮೈ ಲ್ಯಾನ್ (67) ಅವರಿಗೆ ಇಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಪ್ರಮುಖ ಡೆವಲಪರ್ ವ್ಯಾನ್ ಥಿನ್ಹ್ ಫಾಟ್‌ನ ಅಧ್ಯಕ್ಷರಾದ ಟ್ರೂಂಗ್ ಮೈ ಲ್ಯಾನ್ ಅವರ ವಕೀಲರ ವಾದಗಳನ್ನು ಮೂವರು ನ್ಯಾಯಮೂರ್ತಿಗಳಿದ್ದ ಸಮಿತಿಯು ತಿರಸ್ಕರಿಸಿತು. ಸೈಗಾನ್ ಕಮರ್ಷಿಯಲ್ ಬ್ಯಾಂಕ್‌ನಿಂದ (ಎಸ್‌ಸಿಬಿ) ಹಣವನ್ನು ವಂಚಿಸಿದ ಆರೋಪದಲ್ಲಿ ಲ್ಯಾನ್ ತಪ್ಪಿತಸ್ಥೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಲ್ಯಾನ್ ಅವರ ಪತಿ, ಹಾಂಗ್‌ಕಾಂಗ್‌ನ ಸಿರಿವಂತ ಉದ್ಯಮಿ ಎರಿಕ್ ಚು ನಾಪ್ ಕೀ ಅವರಿಗೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಐದು ವಾರಗಳ ವಿಚಾರಣೆಯ ನಂತರ, ಲಂಚ ಮತ್ತು ಅಧಿಕಾರ ದುರುಪಯೋಗದಿಂದ ಹಿಡಿದು ಬ್ಯಾಂಕಿಂಗ್ ಕಾನೂನಿನ ಉಲ್ಲಂಘನೆ ಆರೋಪಗಳ ಮೇಲೆ ಇತರ 85 ಮಂದಿಗೆ ಶಿಕ್ಷೆ ವಿಧಿಸಲಾಯಿತು. ಇದರಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ಉಳಿದವರಿಗೆ 20 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಲ್ಯಾನ್ ಸುಮಾರು ₹1.5 ಲಕ್ಷ ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ. ಆದರೆ, ಹಗರಣದಿಂದ ಆಗಿರುವ ಒಟ್ಟು ಹಾನಿಯು ಈಗ ₹2.25 ಲಕ್ಷ ಕೋಟಿಯಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಗುರುವಾರ ಹೇಳಿದ್ದಾರೆ. ನಷ್ಟದ ಸಂಪೂರ್ಣ ಮೊತ್ತವನ್ನು ಲ್ಯಾನ್ ಭರಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹದ ಭಾಗವಾಗಿ ಈ ಹಗರಣ ಸಂಬಂಧ ಲ್ಯಾನ್ ಸೇರಿದಂತೆ ದೇಶದ ಹಲವು ಉದ್ಯಮಿಗಳು ಮತ್ತು ಅಧಿಕಾರಿಗಳನ್ನು ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಬಂಧಿಸಿದ್ದರು. ಕಳೆದ ವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಲ್ಯಾನ್ ಆತ್ಮಹತ್ಯೆ ಮಾಡಿಕೊಳ್ಳಲು ಉದ್ದೇಶಿಸಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.