ADVERTISEMENT

ಗಡಿಪಾರಿಗೆ ಬ್ರಿಟನ್‌ ಸರ್ಕಾರ ಸಮ್ಮತಿ: ಮೇಲ್ಮನವಿಗೆ ಮಲ್ಯ ಸಿದ್ಧತೆ

ನ್ಯಾಯಾಲಯದಲ್ಲೇ ಸುದೀರ್ಘ ಹೋರಾಟ ನಡೆಸಲು ಪ್ರಯತ್ನ

ಪಿಟಿಐ
Published 6 ಫೆಬ್ರುವರಿ 2019, 1:35 IST
Last Updated 6 ಫೆಬ್ರುವರಿ 2019, 1:35 IST
ವಿಜಯ ಮಲ್ಯ
ವಿಜಯ ಮಲ್ಯ   

ಲಂಡನ್‌: ಭಾರತಕ್ಕೆ ಹಸ್ತಾಂತರ ಮಾಡುವಂತೆ ಬ್ರಿಟನ್‌ ಸರ್ಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಉದ್ಯಮಿ ವಿಜಯ ಮಲ್ಯ ಸಿದ್ಧತೆ ನಡೆಸಿದ್ದಾರೆ.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಗೃಹ ಕಾರ್ಯದರ್ಶಿ ಸಾಜಿದ್‌ ಸಾವಿದ್‌ ಭಾನುವಾರ ಆದೇಶ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮಲ್ಯ ಅವರಿಗೆ ಎರಡು ವಾರಗಳ ಕಾಲಾವಕಾಶವಿದೆ.

ಮಲ್ಯ ಸಲ್ಲಿಸುವ ಮೇಲ್ಮನವಿಯನ್ನು ಅಂಗೀಕರಿಸಲು ಆಧಾರಗಳಿವೆಯೇ ಎನ್ನುವ ಬಗ್ಗೆ ವಿಚಾರಣೆ ನಡೆಯಲಿದೆ. ಇದು ಕೆಲವು ತಿಂಗಳ ಕಾಲ ನಡೆಯಬಹುದು. ಬ್ರಿಟನ್‌ನ ಹೈಕೋರ್ಟ್‌ ಭಾಗವಾಗಿರುವ ಆಡಳಿತ ನ್ಯಾಯಾಲಯದಲ್ಲಿ ಈ ಮೇಲ್ಮನವಿಯ ವಿಚಾರಣೆ ನಡೆಯಲಿದೆ.

ADVERTISEMENT

‘ಮೇಲ್ಮನವಿಯ ಅಂಗೀಕಾರದ ಇಡೀ ಪ್ರಕ್ರಿಯೆಗೆ ಕನಿಷ್ಠ ಐದಾರು ತಿಂಗಳು ಬೇಕು. ಭಾರತ ಸರ್ಕಾರದ ವಕೀಲರು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಕೋರಿಕೆ ಸಲ್ಲಿಸಬಹುದು. ಆದರೆ, ಕಾರಣಗಳನ್ನು ನೀಡಬೇಕಾಗುತ್ತದೆ’ ಎಂದು ವಕೀಲ ಸರೋಷ್‌ ಝೈವಾಲ್ಲಾ ತಿಳಿಸಿದ್ದಾರೆ.

ಆಸ್ತಿ ಮರಳಿಸಲು ಆಕ್ಷೇಪ ಇಲ್ಲ ಎಂದ ಇ.ಡಿ:ವಿಜಯ ಮಲ್ಯ ಅವರ ಆಸ್ತಿಯನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ಮರಳಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಮಲ್ಯ ಅವರ ಆಸ್ತಿಗಳನ್ನು ಮರಳಿಸಬೇಕು ಎಂದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಜಾರಿ ನಿರ್ದೇಶನಾಲಯವು ಪ್ರಮಾಣ ಪತ್ರ ಸಲ್ಲಿಸಿದೆ.

‌ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್‌ ಅಜ್ಮಿ ಅವರ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ ಜಾರಿ ನಿರ್ದೇಶನಾಲಯವು, ಬ್ಯಾಂಕ್‌ಗಳ ಒಕ್ಕೂಟ ಸಲ್ಲಿಸಿದ ಮನವಿ ಬಗ್ಗೆ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಿತು.

ಒಕ್ಕೂಟದಲ್ಲಿ ಒಂದು ಬ್ಯಾಂಕ್‌ ಹೊರತುಪಡಿಸಿದರೆ ಉಳಿದೆಲ್ಲವೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾಗಿವೆ. ಹೀಗಾಗಿ, ಸಾರ್ವಜನಿಕರ ಹಣವನ್ನೇ ಮರುವಶಪಡೆಯಬೇಕಾಗಿದೆ. ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಮಲ್ಯ ಸ್ವತ್ತುಗಳನ್ನು ಮರಳಿಸಬೇಕಾಗಿದೆ ಎಂದು ಇ.ಡಿ ತಿಳಿಸಿದೆ.‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.