ಮಾಸ್ಕೊ: ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಖಚಿತಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ಕಾರ್ಯತಂತ್ರಕ್ಕೆ ಸೋಲುಣಿಸಲು ಪಶ್ಚಿಮದ ರಾಷ್ಟ್ರಗಳಿಗೆ ಸಾಧ್ಯವಿಲ್ಲ ಎಂಬುದಕ್ಕೆ ಇದು ಸಂದೇಶವಾಗಿದೆ ಎಂದು ಹೇಳಿದ್ದಾರೆ.
ಸೇಂಟ್ ಫೀಟರ್ಸ್‌ಬರ್ಗ್‌ನಲ್ಲಿ ನಡೆದ ಪ್ರಮುಖ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಪುಟಿನ್, ಮಿತ್ರ ರಾಷ್ಟ್ರ ಬೆಲಾರಸ್‌ಗೆ ಈಗಾಗಲೇ ಪರಮಾಣು ಶಸ್ತ್ರಾಸ್ತ್ರ ರವಾನಿಸಲಾಗಿದೆ. ಆದಾಗ್ಯೂ, ರಷ್ಯಾ ಅಣ್ವಸ್ತ್ರವನ್ನು ಅವಲಂಬಿಸುವ ಅಗತ್ಯವಿಲ್ಲ ಎಂಬುದನ್ನೂ ಒತ್ತಿ ಹೇಳಿದ್ದಾರೆ.
'ನಿಮಗೆ ತಿಳಿದಿರುವಂತೆ ನಮ್ಮ ಮಿತ್ರ (ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್) ಲುಕಶೆಂಕೊ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಅದರ ಭಾಗವಾಗಿ ಬೆಲಾರಸ್ ಪ್ರದೇಶಕ್ಕೆ ಪರಮಾಣು ಸಿಡಿತಲೆಗಳನ್ನು ರವಾನಿಸಿದ್ದೇವೆ. ಇದು ಮೊದಲ ಹಂತದ ಪ್ರಕ್ರಿಯೆಯಷ್ಟೇ. ಬೇಸಿಗೆ ವೇಳೆಗೆ ಅಥವಾ ವರ್ಷಾಂತ್ಯದ ಹೊತ್ತಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ರಷ್ಯಾ ಪಡೆಗಳು 2022ರ ಫೆಬ್ರುವರಿ 24ರಂದು ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದವು. ಉಭಯ ದೇಶಗಳ ನಡುವೆ ಸಂಘರ್ಷ ಮುಂದುವರಿದಿದೆ.
ಉಕ್ರೇನ್‌ಗೆ ಬೆಂಬಲ ನೀಡುವ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪಶ್ಚಿಮದ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುವುದು, ಬೆಲಾರಸ್‌ನಲ್ಲಿ ಅಣ್ವಸ್ತ್ರ ನಿಯೋಜಿಸಿರುವುದರ ಉದ್ದೇಶ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.