ಮಾಸ್ಕೊ: ಒಂದೂವರೆ ವರ್ಷದಿಂದ ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಪಡೆಗಳ ಭಾಗವಾಗಿದ್ದ ಖಾಸಗಿ ಮಿಲಿಟರಿ ಗುಂಪು ‘ವ್ಯಾಗ್ನರ್’, ಈಗ ರಷ್ಯನ್ ಸೇನೆಯ ವಿರುದ್ಧವೇ ತಿರುಗಿ ಬಿದ್ದಿದೆ.
‘ವ್ಯಾಗ್ನರ್ ಗುಂಪಿನ ಈ ಬಂಡಾಯವು ರಷ್ಯಾ ಬೆನ್ನಿಗೆ ಚೂರಿ ಹಾಕಿದಂತೆ’ ಎಂದು ಕಿಡಿಕಾರಿರುವ ಪುಟಿನ್, ಸರ್ಕಾರದ ವಿರುದ್ಧ ಸಶಸ್ತ್ರ ದಂಗೆ ಎದ್ದವರನ್ನು ಶಿಕ್ಷಿಸಿ, ದೇಶವನ್ನು ರಕ್ಷಿಸುವುದಾಗಿ ಶಪಥ ಮಾಡಿದ್ದಾರೆ.
ಹಣಕ್ಕಾಗಿ ಸೇನೆಯ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಿಲಿಟರಿ ಗುಂಪು ಈ ‘ವ್ಯಾಗ್ನರ್’. ಯೆವ್ಗೆನಿ ಪ್ರಿಗೋಷಿನ್ ಈ ಗುಂಪಿನ ನಾಯಕ. ರಕ್ಷಣಾ ಸಚಿವಾಲಯ ಹಾಗೂ ಪ್ರಿಗೋಷಿನ್ ನಡುವಿನ ಭಿನ್ನಾಭಿಪ್ರಾಯವೇ ಈ ದಂಗೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ರಷ್ಯಾ ಪಡೆಗಳು ಪ್ರಿಗೋಷಿನ್ ಬಂಧನಕ್ಕೆ ಆದೇಶಿಸಿವೆ. ರಾಜಧಾನಿ ಮಾಸ್ಕೊದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಓಡಾಟಕ್ಕೆ ಕೆಲವು ಷರತ್ತುಗಳ ಮೇಲೆ ಅನುಮತಿ ನೀಡಲಾಗಿದೆ.
ಸಶಸ್ತ್ರ ದಂಗೆಯನ್ನು ಸದೆಬಡಿಯಲು ಭದ್ರತಾ ಪಡೆಗಳು ಹಾಗೂ ಸರ್ಕಾರದ ಇತರ ಸಂಸ್ಥೆಗಳಿಗೆ ಆದೇಶಿಸಲಾಗಿದೆ. ದಂಗೆಕೋರರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ಉಕ್ರೇನ್‌ನಲ್ಲಿ ಯುದ್ಧದಲ್ಲಿ ತೊಡಗಿದ್ದ ‘ವ್ಯಾಗ್ನರ್’ ಗುಂಪು ಶನಿವಾರ ಉಕ್ರೇನ್ ಗಡಿ ದಾಟಿ ರಷ್ಯಾದೊಳಗೆ ನುಗ್ಗಿದ್ದು, ರೊಸ್ತೊವ್–ಆನ್–ಡಾನ್ ನಗರವನ್ನು ಪ್ರವೇಶಿಸಿದೆ.
ಈ ನಗರದಿಂದ ವಿಡಿಯೊ ಬಿಡುಗಡೆ ಮಾಡಿರುವ ಪ್ರಿಗೋಷಿನ್, ‘ವಾಯುಪ್ರದೇಶ ಸೇರಿ ಇಡೀ ನಗರ ಈಗ ನಮ್ಮ ವಶದಲ್ಲಿದೆ. ನನ್ನ ಪಡೆಗಳು ಎಲ್ಲ ಮಿಲಿಟರಿ ಸೌಲಭ್ಯಗಳನ್ನು ಹೊಂದಿವೆ’ ಎಂದು ಹೇಳಿದ್ದಾರೆ.
ಮಿಲಿಟರಿ ವಾಹನಗಳು ನಗರದ ರಸ್ತೆಗಳಲ್ಲಿ ಸಂಚರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ಆದರೆ, ರೊಸ್ತೋವ್–ಆನ್–ಡಾನ್ ನಗರವನ್ನು ಪ್ರಿಗೋಷಿನ್ ಹೇಗೆ ಪ್ರವೇಶಿಸಿದರು ಹಾಗೂ ಅವರೊಂದಿಗೆ ಎಷ್ಟು ಯೋಧರಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.
‘ಈ ದಿನ ನಮ್ಮ ಶಿಬಿರಗಳ ಮೇಲೆ ರಷ್ಯಾ ಪಡೆಗಳು ರಾಕೆಟ್ ದಾಳಿ ನಡೆಸಿದವು. ಭಾರಿ ಸಂಖ್ಯೆಯಲ್ಲಿ ನಮ್ಮ ಯೋಧರು ಸಾವನ್ನಪ್ಪಿದ್ದಾರೆ’ ಎಂದು ಪ್ರಿಗೋಷಿನ್ ವಿಡಿಯೊದಲ್ಲಿ ಆರೋಪಿಸಿದ್ದಾರೆ.
‘ರಷ್ಯಾದ ವೊರೊನೆಜ್ ನಗರದ ಹೊರವಲಯದಲ್ಲಿ ಎಂ–4 ಹೆದ್ದಾರಿಯಲ್ಲಿ ಹೊರಟಿದ್ದ ವ್ಯಾಗ್ನರ್ ಬೆಂಗಾಲು ವಾಹನಗಳ ಮೇಲೆ ರಷ್ಯಾ ಪಡೆಗಳ ಹೆಲಿಕಾಪ್ಟರ್‌ಗಳು ದಾಳಿ ನಡೆಸಿವೆ’ ಎಂದು ಪ್ರತ್ಯಕ್ಷದರ್ಶಿಯ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಆದರೆ, ಪ್ರಗೋಷಿನ್ ಅವರ ಈ ಆರೋಪವನ್ನು ರಷ್ಯಾದ ರಕ್ಷಣಾ ಸಚಿವಾಲಯ ತಳ್ಳಿ ಹಾಕಿದೆ.
‘ದೇಶ ಉಕ್ರೇನ್ ವಿರುದ್ಧ ಹೋರಾಡುತ್ತಿರುವ ಕಠಿಣ ಸಮಯವಿದು. ಪಶ್ಚಿಮ ರಾಷ್ಟ್ರಗಳು ತಮ್ಮ ಎಲ್ಲ ಮಿಲಿಟರಿ, ಆರ್ಥಿಕ ಶಕ್ತಿ ಹಾಗೂ ಮಾಹಿತಿ ವ್ಯವಸ್ಥೆಯನ್ನು ಬಳಸಿ ನಮ್ಮ ಮೇಲೆ ಯುದ್ಧ ಸಾರಿವೆ. ಇಂಥ ಸಮಯದಲ್ಲಿನ ಈ ಬಂಡಾಯವನ್ನು ಸಹಿಸಲು ಸಾಧ್ಯವಿಲ್ಲ’ ಎಂದೂ ಪುಟಿನ್ ಹೇಳಿದ್ದಾರೆ.
ರಕ್ಷಣಾ ಸಚಿವ ಶೋಯಿಗು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಮ್ಮದು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವೇ ಹೊರತು ಸೇನೆ ವಿರುದ್ಧದ ದಂಗೆಯಲ್ಲ.ಯೆವ್ಗೆನಿ ಪ್ರಿಗೋಷಿನ್, ‘ವ್ಯಾಗ್ನರ್’ ಗುಂಪಿನ ನಾಯಕ
ಖಾಸಗಿ ಪಡೆಯಾದ ‘ವ್ಯಾಗ್ನರ್’ ಗುಂಪಿನ ಈ ದಂಗೆಯು ರಷ್ಯಾದ ದೌರ್ಬಲ್ಯ ಹಾಗೂ ಅಲ್ಲಿನ ರಾಜಕೀಯ ಅಸ್ಥಿರತೆಗೆ ಸಾಕ್ಷಿ.ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.