ADVERTISEMENT

ಬೆನ್ನಿಗೆ ಚೂರಿ ಹಾಕಿದ ವ್ಯಾಗ್ನರ್ ಗುಂಪು: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿ

ಎಎಫ್‌ಪಿ
Published 24 ಜೂನ್ 2023, 11:07 IST
Last Updated 24 ಜೂನ್ 2023, 11:07 IST
ವ್ಲಾಡಿಮಿರ್ ಪುಟಿನ್ (ಏಜೆನ್ಸಿ ಚಿತ್ರ)
ವ್ಲಾಡಿಮಿರ್ ಪುಟಿನ್ (ಏಜೆನ್ಸಿ ಚಿತ್ರ)   

ಮಾಸ್ಕೊ: ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿರುವ ಖಾಸಗಿ ಮಿಲಿಟರಿ ಪಡೆ 'ವ್ಯಾಗ್ನರ್‌' ಗುಂಪು 'ಬೆನ್ನಿಗೆ ಚೂರಿ ಹಾಕಿದೆ' ಹಾಗೂ ಅದರ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್‌ ದೇಶಕ್ಕೆ ಮೋಸ ಮಾಡಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿಕಾರಿದ್ದಾರೆ.

'ವ್ಯಾಗ್ನರ್‌' ಗುಂಪು ವೊರೊನೆಝ್‌ ನಗರದಲ್ಲಿರುವ ಸೇನಾ ಸೌಕರ್ಯಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ದಕ್ಷಿಣ ಮಾಸ್ಕೊದ 500 ಕಿ.ಮೀ. ಪ್ರದೇಶವನ್ನು ವಶದಲ್ಲಿರಿಸಿಕೊಂಡಿದೆ. ಇದರ ಬೆನ್ನಲ್ಲೇ ಪುಟಿನ್ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

'ಇದು ದೇಶಕ್ಕೆ ಬಗೆದ ದ್ರೋಹ. ನಾವು ಸಂಪೂರ್ಣವಾಗಿ ವಂಚನೆಗೊಳಗಾಗಿದ್ದೇವೆ. ಹದ್ದುಮೀರಿದ ಮಹತ್ವಾಕಾಂಕ್ಷೆಗಳು ಮತ್ತು ವೈಯಕ್ತಿಕ ಇಚ್ಚಾಶಕ್ತಿ ಈ ದ್ರೋಹಕ್ಕೆ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ದಂಗೆ ಎದ್ದಿರುವವ ಗುಂಪು ಶಿಕ್ಷೆ ಅನುಭವಿಸಲಿದೆ ಎಂದು ಎಚ್ಚರಿಸಿರುವ ಪುಟಿನ್, 'ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಘೋಷಿಸಲಾಗಿದೆ' ಎಂದಿದ್ದಾರೆ.

ಇದನ್ನೂ ಓದಿ: ಖಾಸಗಿ ಸೇನಾ ಪಡೆ ಕಟ್ಟಿ ಪುಟಿನ್ ವಿರುದ್ಧ ತಿರುಗಿ ಬಿದ್ದ ಪ್ರಿಗೊಝಿನ್‌ ಯಾರು?

'ಪ‍್ರಜ್ಞಾಪೂರ್ವಕವಾಗಿ ಯಾರೆಲ್ಲ ವಂಚನೆಯ ಹಾದಿ ತುಳಿದಿದ್ದಾರೋ, ಯಾರು ಶಸ್ತ್ರಸಜ್ಜಿತ ದಂಗೆಯನ್ನು ಸಜ್ಜುಗೊಳಿಸಿದ್ದಾರೋ, ಭಯಗೊಳಿಸುವ ಮತ್ತು ಭಯೋತ್ಪಾದಕ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೋ ಅವರೆಲ್ಲರೂ ನೆಲದ ಕಾನೂನು ಮತ್ತು ಜನರೆದುರು ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ' ಎಂದು ಗುಡುಗಿದ್ದಾರೆ.

ರಷ್ಯಾ ನಾಯಕತ್ವವನ್ನು ಉರುಳಿಸುವ 'ವ್ಯಾಗ್ನರ್‌' ಗುಂಪಿನ ಪ್ರಯತ್ನವು ರಾಷ್ಟ್ರೀಯತೆ ಹಾಗೂ ದೇಶದ ಜನರಿಗೆ ಮಾರಣಾಂತಿಕ ಬೆದರಿಕೆಯಾಗಿದೆ ಎಂದು ವಿವರಿಸಿರುವ ಪುಟಿನ್, ದೇಶವು ಒಂದಾಗಿರಬೇಕು ಎಂದು ಕರೆ ನೀಡಿದ್ದಾರೆ.

ರಷ್ಯಾ ಪಡೆಗಳು 2022ರ ಫೆಬ್ರುವರಿ 24ರಿಂದ ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿವೆ. ಈ ಹೊತ್ತಿನಲ್ಲಿ 'ವ್ಯಾಗ್ನರ್‌' ಗುಂಪು ದಂಗೆ ಎದ್ದಿದೆ. ಇದೇ ರೀತಿಯ ಪರಿಸ್ಥಿತಿ 1917ರಲ್ಲಿ ರಾಷ್ಟ್ರಕ್ಕೆ ಎದುರಾಗಿತ್ತು. ಆಗ ವಿಶ್ವಯುದ್ಧದ ಗೆಲುವನ್ನು ನಮ್ಮಿಂದ ಕುಸಿದುಕೊಳ್ಳಲಾಯಿತು. ಅದು, ನಾಗರಿಕ ದಂಗೆಗೆ ನಾಂದಿಯಾಯಿತು. ಇತಿಹಾಸ ಮರುಕಳಿಸಲು ನಾವು ಬಿಡುವುದಿಲ್ಲ. ಆಂತರಿಕ ವಂಚನೆಗಳೂ ಸೇರಿದಂತೆ ಯಾವುದೇ ಬೆದರಿಕೆಗಳಿಂದ ನಮ್ಮ ಜನರನ್ನು, ರಾಷ್ಟ್ರೀಯತೆಯನ್ನು ರಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

'ವ್ಯಾಗ್ನರ್‌' ಗುಂಪು ನಿಯಂತ್ರಣ ಸಾಧಿಸಿರುವ ಪ್ರಮುಖ ನಗರವಾದ ರೊಸ್ಟೊವ್‌–ಆನ್‌–ಡಾನ್‌ನಲ್ಲಿ ಕಠಿಣ ಪರಿಸ್ಥಿತಿ ಇದೆ ಎಂದು ಒಪ್ಪಿಕೊಂಡಿರುವ ಪುಟಿನ್‌, ಪರಿಸ್ಥಿತಿ ಸ್ಥಿರಗೊಳಿಸಲು ನಿರ್ಣಾಯಕ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ರಷ್ಯಾ ಸೇನೆ ವಿರುದ್ಧ ತಿರುಗಿಬಿದ್ದ 'ವ್ಯಾಗ್ನರ್‌' ಗುಂಪು

ತೀರಾ ಅಪರೂಪವೆಂಬಂತೆ ಪೂರ್ವನಿಗದಿ ಇಲ್ಲದೆ ದೇಶವನ್ನುದ್ದೇಶಿಸಿ ಮಾತನಾಡಿರುವ ಪುಟಿನ್, ರಷ್ಯಾ ಅಧ್ಯಕ್ಷರಾಗಿ, ಸೇನಾ ಪಡೆಗಳ ಮುಖ್ಯಸ್ಥರಾಗಿ ಮತ್ತು ರಷ್ಯಾದ ನಾಗರಿಕನಾಗಿ ನನ್ನ ದೇಶದ ರಕ್ಷಣೆಗಾಗಿ, ಜನರ ಪ್ರಾಣ, ಸುರಕ್ಷತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

'ವ್ಯಾಗ್ನರ್‌' ಗುಂಪಿನ ನಾಯಕ ಯೆವ್ಗೆನಿ ಪ್ರಿಗೊಝಿನ್‌, ರೊಸ್ಟೊವ್‌ ನಗರದಲ್ಲಿರುವ ಸೇನಾ ಪ್ರಧಾನ ಕಚೇರಿಯ ಒಳಗೆ ಇದ್ದೇನೆ. ನಮ್ಮ ಯೋಧರು ಸೇನಾ ಸೌಕರ್ಯಗಳ ಮೇಲೆ ಹಿಡಿತ ಸಾಧಿಸಿದ್ದಾರೆ. 25,000 ಯೋಧರನ್ನೊಳಗೊಂಡ ನಮ್ಮ ಬಲಿಷ್ಠ ಪಡೆಯು ರಷ್ಯಾ ಸೇನಾ ನಾಯಕತ್ವ ಉರುಳಿಸುವ ಸಲುವಾಗಿ ಸಾಯುವುದಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.