ADVERTISEMENT

ಉಕ್ರೇನ್‌ನಲ್ಲಿ 2ನೇ ತಿಂಗಳಿಗೆ ಕಾಲಿಟ್ಟ ಸಂಘರ್ಷ: ನಿರೀಕ್ಷಿತ ಯಶಸ್ಸು ಕಾಣದ ರಷ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 14:23 IST
Last Updated 28 ಮಾರ್ಚ್ 2022, 14:23 IST
ವ್ಲಾಡಿಮಿರ್ ಪುಟಿನ್- ವೊಲೊಡಿಮಿರ್ ಝೆಲೆನ್‌ಸ್ಕಿ
ವ್ಲಾಡಿಮಿರ್ ಪುಟಿನ್- ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್ (ಉಕ್ರೇನ್): ಉಕ್ರೇನ್‌ನ ಆಯಕಟ್ಟಿನ ಪ್ರದೇಶಗಳನ್ನು ಗುರಿಯಾಗಿರಿಸಿ ರಷ್ಯಾ ಸೇನಾಪಡೆಗಳು ನಡೆಸುತ್ತಿರುವ ಆಕ್ರಮಣವು ಎರಡನೇ ತಿಂಗಳಿಗೆ ಕಾಲಿಟ್ಟಿದ್ದರೂ, ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ರಾಜಧಾನಿ ಕೀವ್‌ ಸುತ್ತಲೂ ಉಕ್ರೇನ್‌ ಸೇನೆ ಪ್ರತಿರೋಧ ಒಡ್ಡುತ್ತಿದೆ. ಆದರೆ, ಮರಿಯುಪೋಲ್ ನಗರವನ್ನು ರಷ್ಯಾ ಹಿಡಿತಕ್ಕೆ ಪಡೆಯುವುದು ಸನ್ನಿಹಿತವಾಗಿದೆ ಎಂದು 'ನ್ಯೂಯಾರ್ಕ್‌ ಟೈಮ್ಸ್‌' ವಿಶ್ಲೇಷಿಸಿದೆ.

ಬಿಕ್ಕಟ್ಟಿನ ಪರಿಸ್ಥಿತಿ ಎರಡನೇ ತಿಂಗಳಿಗೆ ಮುಂದುವರಿದಿದೆ. ಆದರೆ, ಉಕ್ರೇನ್‌ನಲ್ಲಿ ದೊಡ್ಡ ದೊಡ್ಡ ನಗರಗಳನ್ನು ವಶಕ್ಕೆ ಪಡೆಯುವ ಯೋಜನೆಯಲ್ಲಿ ರಷ್ಯಾ ವೈಫಲ್ಯ ಕಂಡಿದೆ. ಹೀಗಾಗಿತನ್ನ ಕಾರ್ಯತಂತ್ರದ ತತ್‌ಕ್ಷಣದ ಗುರಿಯನ್ನು ಆಯಕಟ್ಟಿನ ಪ್ರದೇಶಗಳಾದ ಉತ್ತರದ ಚೆರ್ನಿಹಿವ್ ಮತ್ತು ದಕ್ಷಿಣದ ಬಂದರು ನಗರವಾದ ಮರಿಯುಪೋಲ್ಅನ್ನು ವಶಪಡಿಸಿಕೊಳ್ಳುವುದಕ್ಕೆ ಸೀಮಿತಗೊಳಿಸಿಕೊಂಡಿದೆ.

ಕೀವ್‌ನಲ್ಲಿ ಭಾನುವಾರ ಹಗಲಿನ ವೇಳೆವಾಯುದಾಳಿಯ ಸೈರನ್‌ಗಳು ಮೊಳಗಿದ್ದು ಬಿಟ್ಟರೆ, ಶಾಂತಿಯುತವಾಗಿತ್ತು. ಇದು, ಕೀವ್‌ ಬದಲು ಉಕ್ರೇನ್‌ನ ಪೂರ್ವ ಪ್ರದೇಶಗಳತ್ತ ಗಮನ ಕೇಂದ್ರೀಕರಿಸುವುದಾಗಿ ರಷ್ಯಾ ರಕ್ಷಣಾ ಸಚಿವಾಲಯನೀಡಿದ್ದಹೇಳಿಕೆಯನ್ನು ಸಮರ್ಥಿಸುವಂತಿದೆ. ಉಕ್ರೇನ್‌ ಸೇನಾ ಮೂಲಗಳ ಪ್ರಕಾರ, ಬೆಲರೂಸ್‌ನಲ್ಲಿ ಸೇನೆಯನ್ನು ಮರುಸಂಘಟನೆಗೊಳಿಸುವ ಸಲುವಾಗಿರಷ್ಯಾ ತನ್ನ ಕೆಲವು ಪಡೆಗಳನ್ನು ಹಿಂಪಡೆದಿದೆ. ಆದರೆ, ಚೆರ್ನಿಹಿವ್ ಮತ್ತು ಕೀವ್‌ನ ಈಶಾನ್ಯ ಭಾಗದಲ್ಲಿ ಭಾರಿ ಫಿರಂಗಿ ದಾಳಿಯನ್ನು ಮುಂದುವರಿಸಿದೆ ಎನ್ನಲಾಗಿದೆ.

ತನ್ನ ಗಡಿಗೆ ಸಮೀಪದಲ್ಲಿರುವಈಶಾನ್ಯ ನಗರ ಹಾರ್ಕಿವ್‌ ಅನ್ನು ವಶಕ್ಕೆ ಪಡೆಯಲು ರಷ್ಯಾ ನಡೆಸಿದ ಫಿರಂಗಿ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, ಉಕ್ರೇನ್‌ ಪಡೆಗಳಿಗೆ ಸರಬರಾಜು ಮಾರ್ಗಗಳನ್ನು ಮುಚ್ಚುವ ಉದ್ದೇಶದಿಂದ ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ತೈಲ ಸಂಗ್ರಹ ಘಟಕ ಮೇಲೆ ಕ್ಷಿಪಣಿ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಉಕ್ರೇನ್‌ನ ಮಾಧ್ಯಮವೊಂದು ವರದಿ ಮಾಡಿದೆ.

ರಷ್ಯಾ ಸೇನೆ ತನ್ನ ಕಾರ್ಯತಂತ್ರವನ್ನು ದಕ್ಷಿಣ ಮತ್ತು ಪೂರ್ವದ ಕಡೆಗೆ ಬದಲಿಸಿಕೊಂಡಿದೆ. ಉಕ್ರೇನ್‌ ಅನ್ನು ರಷ್ಯಾ ಆಕ್ರಮಿತ ಮತ್ತು ಇತರ ಪ್ರದೇಶಗಳೆಂದು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಉಕ್ರೇನ್‌ ಸೇನಾ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.

'ಇದು ಉಕ್ರೇನ್‌ನಲ್ಲಿ ಉತ್ತರ ಮತ್ತು ದಕ್ಷಿಣ ಕೋರಿಯಾವನ್ನು ಸೃಷ್ಟಿಸುವ ಪ್ರಯತ್ನವಾಗಿದೆ' ಎಂದುಉಕ್ರೇನ್‌ ರಕ್ಷಣಾ ಇಲಾಖೆ ಗುಪ್ತಚರ ವಿಭಾಗದ ಮುಖ್ಯಸ್ಥ ಜನರಲ್ ಬ್ರಿಗೇಡಿಯರ್ ಕಿರಿಲೊ ಬುಡನೊವ್‌ಹೇಳಿದ್ದಾರೆ.

ರಷ್ಯಾ ಸೇನೆ ಕೀವ್‌ನ ಉತ್ತರದ ಪ್ರಮುಖ ಪ್ರದೇಶಗಳನ್ನು ಹಿಡಿತಕ್ಕೆ ಪಡೆಯಲು ನಿರಂತರವಾಗಿ ಆಕ್ರಮಣ ನಡೆಸುತ್ತಿದೆ. ಹಾಗೆಯೇ ಮರಿಯುಪೋಲ್ ನಗರವನ್ನು ಸಂಪೂರ್ಣ ವಶಕ್ಕೆ ಪಡೆಯುವಪ್ರಯತ್ನಕ್ಕೆ, ಅಡ್ಡಿಪಡಿಸುತ್ತಿರುವಉಕ್ರೇನ್‌ ಸೇನೆಯನ್ನು ಹಿಮ್ಮೆಟ್ಟಿಸಲು ದೇಶದಾದ್ಯಂತ ದಾಳಿ ಮುಂದುವರಿಸಿದೆ.ರಷ್ಯಾ ಸೇನೆ ಮುತ್ತಿಗೆ ಹಾಕಿದ ಬಳಿಕ ಮರಿಯುಪೋಲ್‌ ನಗರದಲ್ಲಿ ಸಿಲುಕಿರುವ ಉಕ್ರೇನ್ ಸೈನಿಕರು ಅಹಾರ ಮತ್ತು ಕುಡಿಯುವ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಚರಂಡಿ ನೀರನ್ನೇ ಬಳಸುವ ದುಸ್ಥಿತಿ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.