ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಜತೆ ಗುರುತಿಸಿಕೊಂಡಿರುವ ಭಾರತೀಯ– ಅಮೆರಿಕನ್ನರ ಪ್ರಮಾಣದಲ್ಲಿ ಇಳಿಕೆ ದಾಖಲಾಗುತ್ತಿದ್ದರೆ, ಮತ್ತೊಂದೆಡೆ ರಿಪಬ್ಲಿಕನ್ ಪಕ್ಷದ ಜತೆ ಗುರುತಿಸಿಕೊಂಡಿರುವವರ ಪ್ರಮಾಣದಲ್ಲಿ ಅಲ್ಪ ಏರಿಕೆಯಾಗಿದೆ. ಇದು ಡೆಮಾಕ್ರಟಿಕ್ ಪಕ್ಷಕ್ಕೆ ಎಚ್ಚರಿಕೆಯ ಸಂಕೇತವನ್ನು ರವಾನಿಸಿದೆ ಎನ್ನುತ್ತಾರೆ ತಜ್ಞರು.
‘ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್’ ಸಂಸ್ಥೆ ನಡೆಸಿರುವ ಹೊಸ ಸಮೀಕ್ಷೆಯಲ್ಲಿ (2024) ಈ ಅಂಶ ಗೊತ್ತಾಗಿದೆ.
ಭಾರತೀಯ– ಅಮೆರಿಕನ್ನರು ಡೆಮಾಕ್ರಟಿಕ್ ಪಕ್ಷದ ಹಿಂದೆ ದೃಢವಾಗಿ ನಿಂತಿದ್ದಾರೆ. ಆದರೆ, ರಿಪಬ್ಲಿಕನ್ ಅಭ್ಯರ್ಥಿಗಳು ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನ್ನು ಬೆಂಬಲಿಸುವವರ ಪ್ರಮಾಣ ಅಲ್ಪ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.
ಸೆಪ್ಟೆಂಬರ್ 18ರಿಂದ ಅಕ್ಟೋಬರ್ 15ರ ನಡುವೆ 714 ಭಾರತೀಯ– ಅಮೆರಿಕನ್ ನಾಗರಿಕರು ಆನ್‌ಲೈನ್ ಸಮೀಕ್ಷೆ ಎದುರಿಸಿದ್ದರು. ಸಮೀಕ್ಷೆಯ ಪ್ರಕಾರ, ನೋಂದಾಯಿತ ಭಾರತೀಯ– ಅಮೆರಿಕನ್ ಮತದಾರರಲ್ಲಿ ಶೇ 61ರಷ್ಟು ಜನರು ಕಮಲಾ ಹ್ಯಾರಿಸ್‌ಗೆ ಮತ ಹಾಕಲು ಯೋಜಿಸಿದ್ದರೆ, ಶೇ 32ರಷ್ಟು ಜನರು ಡೊನಾಲ್ಡ್ ಟ್ರಂಪ್ ಅವರಿಗೆ ಮತ ನೀಡಲು ಉದ್ದೇಶಿಸಿದ್ದಾರೆ.
ಇದು 2020ರಿಂದ ಟ್ರಂಪ್‌ಗೆ ಮತ ಚಲಾಯಿಸುವ ಸಂಬಂಧ ಪ್ರತಿಕ್ರಿಯಿಸುತ್ತಿದ್ದವರ ಪ್ರಮಾಣದಲ್ಲಿ ಅಲ್ಪ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ.
ಭಾರತೀಯ– ಅಮೆರಿಕನ್ ಮಹಿಳೆಯರ ಪೈಕಿ ಶೇ 67ರಷ್ಟು ಹಾಗೂ ಪುರುಷರ ಪೈಕಿ ಶೇ 53ರಷ್ಟು ಮಂದಿ ಕಮಲಾ ಅವರಿಗೆ ಮತ ಹಾಕಲು ಉದ್ದೇಶಿಸಿದ್ದರೆ. ಶೇ 22ರಷ್ಟು ಮಹಿಳೆಯರು ಮತ್ತು ಶೇ 39ರಷ್ಟು ಪುರುಷರು ಟ್ರಂಪ್‌ಗೆ ಮತ ಚಲಾಯಿಸಲು ಯೋಜಿಸಿದ್ದಾರೆ ಎಂದು ಅದು ಅದು ತಿಳಿಸುತ್ತದೆ.
ಅಮೆರಿಕದಲ್ಲಿ 52 ಲಕ್ಷ ಭಾರತೀಯ ಮೂಲದವರು ವಾಸಿಸುತ್ತಿದ್ದು, ಈ ಪೈಕಿ 39 ಲಕ್ಷ ಜನರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಭಾರತೀಯ– ಅಮೆರಿಕನ್ನರು, ಅಮೆರಿಕದಲ್ಲಿ ನೆಲೆಸಿರುವ ಎರಡನೇ ಅತಿ ದೊಡ್ಡ ವಲಸಿಗರ ಗುಂಪಿಗೆ ಸೇರಿದವರು ಎಂಬ ಹಿರಿಮೆ ಹೊಂದಿದ್ದಾರೆ. 2022ರ ದತ್ತಾಂಶದ ಪ್ರಕಾರ 26 ಲಕ್ಷ ಭಾರತೀಯ– ಅಮೆರಿಕನ್ ಮತದಾರರು ಅಮೆರಿಕದಲ್ಲಿದ್ದರು.
ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 96ರಷ್ಟು ಭಾರತೀಯ– ಅಮೆರಿಕನ್ನರು ಮತ ಚಲಾಯಿಸುವುದಾಗಿ ಹೇಳಿದ್ದಾರೆ ಎಂದು ಐಎಎಎಸ್ ಸಮೀಕ್ಷೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.