ನ್ಯೂಯಾರ್ಕ್: ಅಮೆರಿಕವು 2023ನೇ ಸಾಲಿನಲ್ಲಿ ಭಾರತದೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸಿಕೊಂಡಿದೆ ಅಲ್ಲದೆ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳೊಂದಿಗೆ ‘ಕ್ವಾಡ್’ ಮೂಲಕ ಸಹಕಾರವನ್ನೂ ಹೆಚ್ಚಿಸಿಕೊಂಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ತಿಳಿಸಿದರು.
ವಾಷಿಂಗ್ಟನ್‌ನಲ್ಲಿ ವಿದೇಶಾಂಗ ಇಲಾಖೆಯ ವತಿಯಿಂದ ಬುಧವಾರ ನಡೆದ ವರ್ಷಾಂತ್ಯದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಸಮರ್ಥವಾಗಿ ಎದುರಿಸಲು 2017ರಲ್ಲಿ ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ಸೇರಿ ‘ಕ್ವಾಡ್’ ಒಕ್ಕೂಟಕ್ಕೆ ರಚಿಸಿಕೊಂಡಿವೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ವರ್ಷದ ಜೂನ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಆ ನಂತರ ಭಾರತದಲ್ಲಿ ಮೋದಿ ಅವರು ಆಯೋಜಿಸಿದ್ದ ಜಿ20 ನಾಯಕರ ಶೃಂಗದಲ್ಲಿ ಬೈಡನ್ ಪಾಲ್ಗೊಂಡಿದ್ದರು.
ಬೈಡನ್ ಅವರು ಜಪಾನ್ ಮತ್ತು ದಕ್ಷಿಣ ಕೊರಿಯಾದ ಜತೆಗೆ ಐತಿಹಾಸಿಕ ಶೃಂಗಸಭೆ ನಡೆಸಿ, ತ್ರಿಪಕ್ಷೀಯ ಸಹಕಾರದ ಹೊಸ ಯುಗಕ್ಕೆ ನಾಂದಿಯಾಡಿದ್ದಾರೆ ಎಂದರು.
ಅಣ್ವಸ್ತ್ರ ಸಾಮರ್ಥ್ಯದ ಜಲಾಂತರಗಾಮಿ ನೌಕೆಗಳನ್ನು ತಯಾರಿಸಲು ಅಮೆರಿಕವು ಬ್ರಿಟನ್ ಮತ್ತು ಆಸ್ಟ್ರೇಲಿಯಾ ಜತೆಗೆ ಕೆಲಸ ಮಾಡುತ್ತಿದೆ. ಅಲ್ಲದೆ ಅಮೆರಿಕವು ವಿಯೆಟ್ನಾಂ ಮತ್ತು ಇಂಡೋನೇಷ್ಯಾದೊಂದಿಗೆ ಹೊಸದಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಆರಂಭಿಸಿದೆ. ಫಿಲಿಪ್ಪಿನ್ಸ್ ಜತೆಗೆ ಹೊಸ ರಕ್ಷಣಾ ಸಹಕಾರ ಒಪ್ಪಂದ, ಫಿಲಿಪ್ಪಿನ್ಸ್ ಮತ್ತು ಜಪಾನ್‌ನೊಂದಿಗೆ ಹೊಸ ತ್ರಿಪಕ್ಷೀಯ ಕ್ರಮಗಳನ್ನು, ಸೊಲೊಮನ್ ಮತ್ತು ಟೊಂಗಾ ದ್ವೀಪಗಳಲ್ಲಿ ಹೊಸ ರಾಯಭಾರ ಕಚೇರಿಗಳನ್ನು ಪ್ರಾರಂಭಿಸಿದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.