ADVERTISEMENT

ಸ್ವರಕ್ಷಣೆಗಾಗಿ ಭಾರತದ ಹಕ್ಕನ್ನು ಬೆಂಬಲಿಸುತ್ತೇವೆ: ಅಮೆರಿಕ ಎನ್‌ಎಸ್‌ಎ ಬೋಲ್ಟನ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 2:22 IST
Last Updated 16 ಫೆಬ್ರುವರಿ 2019, 2:22 IST
   

ವಾಷಿಂಗ್ಟನ್‌:‘ಸ್ವರಕ್ಷಣೆಗಾಗಿ ಭಾರತದ ಹಕ್ಕನ್ನು ಬೆಂಬಲಿಸುತ್ತೇವೆ’ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್‌ ಅವರಿಗೆ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವೋಂತಿಪೊರದಲ್ಲಿ ಜೈಷ್‌ ಉಗ್ರರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಲು ಜಾನ್‌ ಬೋಲ್ಟನ್‌ ಅವರು ಅಜಿತ್‌ ದೋವಾಲ್‌ ಅವರಿ‌ಗೆ ಶುಕ್ರವಾರ ದೂರವಾಣಿ ಕರೆ ಮಾಡಿ ಮಾತನಾಡಿ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

‘ನಾವು ಸ್ವರಕ್ಷಣೆಗಾಗಿ ಭಾರತದ ಹಕ್ಕನ್ನು ಬೆಂಬಲಿಸುತ್ತೇವೆ ಎಂದು ನಾನು ಇಂದು ಅಜಿತ್‌ ದೋವಾಲ್‌ ಅವರಿಗೆ ತಿಳಿಸಿದ್ದೇನೆ. ಈ ಕುರಿತು ಈ ಬೆಳಿಗ್ಗೆಯಿಂದ ಅವರ ಜತೆ ಎರಡು ಬಾರಿ ಮಾತನಾಡಿದ್ದೇನೆ ಮತ್ತು ಭಯೋತ್ಪಾದಕರ ದಾಳಿಗೆ ಅಮೆರಿಕ ಸಂತಾಪ ವ್ಯಕ್ತಪಡಿಸುತ್ತದೆ’ ಎಂದು ಪಿಟಿಐಗೆ ತಿಳಿಸಿದ್ದಾಗಿ ವಿಶೇಷ ವರದಿ ಮಾಡಿದೆ.

ADVERTISEMENT

ಉಗ್ರರಿಗೆ ಸುರಕ್ಷಿತ ತಾಣ ಒದಗಿಸುವ ಕೆಲಸವನ್ನು ಕೊನೆಗೊಳಿಸಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕ ಅತ್ಯಂತ ಸ್ಪಷ್ಟವಾಗಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ.

‘ಈ ವಿಷಯವಾಗಿ ನಾವು ಸ್ಪಷ್ಟವಾಗಿದ್ದೇವೆ ಮತ್ತು ಪಾಕಿಸ್ತಾನದ ಜತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಅಮೆರಿಕ ಕಟು ಸಂದೇಶವನ್ನೂ ಪಾಕಿಸ್ತಾನಕ್ಕೆ ರವಾನಿಸಿದೆ.

‘ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ಒದಗಿಸುವ ಕೆಲಸ ಮಾಡಬಾರದು. ಅವರ ಗುರಿ ಇರುವುದು ಗೊಂದಲ ಸೃಷ್ಟಿ, ಹಿಂಸೆ ಮತ್ತು ಈ ಪ್ರದೇಶದಲ್ಲಿ ಭಯೋತ್ಪಾದನೆ ಸೃಷ್ಟಿ ಮಾತ್ರ’ ಎಂದು ಅಮೆರಿಕದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಹೇಳಿದ್ದಾರೆ.

‘ಭಾರತ ಮತ್ತು ಅಮೆರಿಕದ ನಡುವೆ ಇರುವ ಭಯೋತ್ಪಾದನೆ ತಡೆ ಸಹಕಾರ ಮತ್ತು ಸಮನ್ವಯವನ್ನು ಈ ದಾಳಿಯು ಇನ್ನಷ್ಟು ಗಟ್ಟಿಗೊಳಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಎಲ್ಲ ರೀತಿಯ ಭಯೋತ್ಪಾದನೆಗಳ ವಿರುದ್ಧ ಹೋರಾಡಲು ಭಾರತದ ಜತೆಗೆ ಕೆಲಸ ಮಾಡುವುದಾಗಿ ಅಮೆರಿಕದ ವಿದೇಶಾಂಗ ಸಚಿವಾಲಯವೂ ಹೇಳಿದೆ.

ಉಗ್ರರು ಗುರುವಾರ ಮಧ್ಯಾಹ್ನ 3.1ಕ್ಕೆ ನಡೆಸಿದ ದಾಳಿಯಲ್ಲಿ 49 ಯೋಧರು ಹುತಾತ್ಮರಾಗಿದ್ದಾರೆ.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.