ADVERTISEMENT

ಗಾಜಾ, ಲೆಬನಾನ್‌ನ 50 ಸ್ಥಳಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ ಇಸ್ರೇಲ್

ಏಜೆನ್ಸೀಸ್
Published 9 ನವೆಂಬರ್ 2024, 13:30 IST
Last Updated 9 ನವೆಂಬರ್ 2024, 13:30 IST
<div class="paragraphs"><p>ಗಾಜಾದಲ್ಲಿ ಇಸ್ರೇಲ್ ದಾಳಿ</p></div>

ಗಾಜಾದಲ್ಲಿ ಇಸ್ರೇಲ್ ದಾಳಿ

   

- ರಾಯಿಟರ್ಸ್ ಚಿತ್ರ

ಜೆರುಸಲೇಂ: ಗಾಜಾ ಹಾಗೂ ಲೆಬನಾನ್‌ನ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್‌ ಸೇನೆ ಶನಿವಾರ ಹೇಳಿದೆ.

ADVERTISEMENT

ಇಸ್ರೇಲ್‌ ಸೇನೆಯು ರಾತ್ರೋರಾತ್ರಿ ನಡೆಸಿದ ದಾಳಿಯಿಂದಾಗಿ, ಮಹಿಳೆಯರು, ಮಕ್ಕಳು ಸೇರಿದಂತೆ 14 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯು ಹೇಳಿದೆ. ಆದರೆ, ಇಸ್ರೇಲ್‌ ಸೇನೆಯು, ಹತ್ತಾರು ಉಗ್ರರನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.

ಯುದ್ಧದಿಂದ ನಿರಾಶ್ರಿತರಾಗಿರುವವರಿಗಾಗಿ ಖಾನ್‌ ಯೂನಿಸ್‌ ನಗರದ ದಕ್ಷಿಣದಲ್ಲಿ ತೆರೆಯಲಾಗಿರುವ ಶಿಬಿರಗಳ ಮೇಲೆ ದಾಳಿ ನಡೆದಿದೆ. ಇಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮುದ್‌ ಬಸ್ಸಲ್‌ ತಿಳಿಸಿದ್ದಾರೆ.

ಮಾನವೀಯ ನೆರವು ಸಂಘಟನೆ 'ಪ್ಯಾಲೆಸ್ಟೀನಿಯಯನ್‌ ರೆಡ್‌ ಕ್ರೆಸೆಂಟ್‌' ಸಹ ದಾಳಿಯಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ 'ನಾಸ್ಸೆರ್‌' ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.

ಲೆಬನಾನ್‌ನ ಕರಾವಳಿ ನಗರ ಟೈರ್‌ನಲ್ಲಿ ಇಸ್ರೇಲ್‌ ದಾಳಿಯಿಂದಾಗಿ ಕನಿಷ್ಠ 7 ಮಂದಿ ಮೃತಪಟ್ಟು, 46 ಜನರು ಗಾಯಗೊಂಡಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ಖಚಿತಪಡಿಸಿದೆ.

ಯುದ್ಧದಿಂದ ಸಾವು; 43,552ಕ್ಕೆ ಏರಿಕೆ
ಇಸ್ರೇಲ್‌ ಸೇನೆ ಪ್ರತಿದಾಳಿ ಆರಂಭಿಸಿದಾಗಿನಿಂದ ಮೃತಪಟ್ಟವರ ಸಂಖ್ಯೆ 43,552ಕ್ಕೆ ಏರಿಕೆಯಾಗಿದೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.

ಹಮಾಸ್ ಬಂಡುಕೋರರು ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ದಾಳಿ ಮಾಡಿದ್ದರು. ಅದರಿಂದಾಗಿ ಸುಮಾರು 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ದಾಳಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.