ಜೆರುಸಲೇಂ: ಇಸ್ಲಾಮಿಕ್ ಜಿಹಾದ್ ಜಾಲದ ಮುಖ್ಯಸ್ಥನನ್ನು ಗುರುವಾರ ಹೊಡೆದುರುಳಿಸಿರುವುದಾಗಿ ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಹಾಗೂ ಇಸ್ರೇಲ್ ರಕ್ಷಣಾ ಪ್ರಾಧಿಕಾರ (ಐಎಸ್‌ಎ) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
'ಭಯೋತ್ಪಾದನೆಯ ವಿರುದ್ಧ ಐಡಿಎಫ್ ಹಾಗೂ ಐಎಸ್‌ಎ ನಡೆಸಿದ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲ್ ವಾಯುಪಡೆಯು ತುಲ್ಕರ್ಮ್ ಪ್ರದೇಶದ ಮೇಲೆ ದಾಳಿ ಮಾಡಿತು. ಈ ವೇಳೆ ನೂರ್ ಶ್ಯಾಮ್ಸ್‌ನಲ್ಲಿ ಇಸ್ಲಾಮಿಕ್ ಜಿಹಾದ್ ಜಾಲದ ಮುಖ್ಯಸ್ಥನಾಗಿದ್ದ ಮುಹಮ್ಮದ್ ಅಬ್ದುಲ್ಲಾ ಹತ್ಯೆಯಾಗಿದ್ದಾನೆ. ಇನ್ನಷ್ಟು ಉಗ್ರರನ್ನೂ ಹೊಡೆದುರುಳಿಸಲಾಗಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ತುಲ್ಕರ್ಮ್ ಪ್ರದೇಶದ ಭಯೋತ್ಪಾದಕ ಜಾಲದ ಮುಖ್ಯಸ್ಥನಾಗಿದ್ದ ಮಹಮ್ಮದ್ ಜಬ್ಬರ್‌ಗೆ (ಅಬು ಶುಜಾ), ಅಬ್ದುಲ್ಲಾ ಉತ್ತರಾಧಿಕಾರಿಯಾಗಿದ್ದ. ಜಬ್ಬರ್ ಆಗಸ್ಟ್ 29ರಂದು ಹತ್ಯೆಯಾಗಿದ್ದ.
'ಇಸ್ರೇಲ್ ಪಡೆಗಳು ಗಾಜಾಪಟ್ಟಿಯ ಉತ್ತರದಲ್ಲಿ ಶುಕ್ರವಾರ ದಾಳಿ ನಡೆಸಿವೆ. ದಕ್ಷಿಣ ಗಾಜಾದ ದಿಯೆರ್ ಎಲ್-ಬಲಾಹ್ ಮತ್ತು ಅಲ್-ಹಕ್ರ್‌ನಲ್ಲಿ ವಾಯು ದಾಳಿ ಆರಂಭವಾಗಿದೆ' ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ 'ಅಲ್ ಜಜೀರಾ' ವರದಿ ಮಾಡಿದೆ.
ಗಾಜಾದಲ್ಲಿನ ನಿರಾಶ್ರಿತರ ಆಶ್ರಯ ಶಿಬಿರದ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.