ADVERTISEMENT

ಉತ್ತರ ಗಾಜಾ ಮೇಲೆ ಇಸ್ರೇಲ್ ದಾಳಿ: 93 ಸಾವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 17:57 IST
Last Updated 29 ಅಕ್ಟೋಬರ್ 2024, 17:57 IST
   

ಡೇರ್‌ ಅಲ್‌ ಬಾಲಾ, ಗಾಜಾ ಪಟ್ಟಿ, (ಎಪಿ): ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಪ್ಯಾಲೇಸ್ಟಿನ್‌ನ ನಿರಾಶ್ರಿತರು ನೆಲಸಿದ್ದ ಐದು ಮಹಡಿ ಕಟ್ಟಡದ ಮೇಲೆ ಇಸ್ರೇಲ್‌ ಸೇನೆಯು ಮಂಗಳವಾರ ವಾಯುದಾಳಿ ನಡೆಸಿದ್ದು, 93 ಮಂದಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಮಹಿಳೆಯರು, ಮಕ್ಕಳೇ ಅರ್ಧಕ್ಕಿಂತಲೂ ಹೆಚ್ಚಿದ್ದಾರೆ ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ.

ಕ್ಷಿಪಣಿ ಕೇಂದ್ರಗಳಿಗೆ ಹಾನಿ: ಇಸ್ರೇಲ್‌ ಇತ್ತೀಚಿಗೆ ಇರಾನ್‌ ಮೇಲೆ ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಖಂಡಾಂತರ ಕ್ಷಿಪಣಿ ಹಾಗೂ ಬಾಹ್ಯಾಕಾಶ ಯೋಜನೆಗಳಿಗೆ ಬಳಸಲು ಉದ್ದೇಶಿಸಿದ್ದ ರಾಕೆಟ್‌ಗಳಿಗೆ ತೀವ್ರ ಹಾನಿಯಾಗಿದೆ. ಸೆಮ್ನಾನ್‌ ಪ್ರಾಂತ್ಯದ ಶಹರುಡ್‌ನಲ್ಲಿದ್ದ ಬಾಹ್ಯಾಕಾಶ ಕೇಂದ್ರದ ಕಟ್ಟಡಗಳು ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಸ್ಯಾಟಲೈಟ್‌ ಚಿತ್ರಗಳಿಂದ ಕಂಡುಬಂದಿದೆ.

ADVERTISEMENT

ಹಮಾಸ್‌ ಬಂಡುಕೋರರ ವಿರುದ್ಧ ಇಸ್ರೇಲ್‌ ಯುದ್ಧ ಆರಂಭಿಸಿದ ದಿನದಿಂದ ನಡೆದ ಸೇನಾ ದಾಳಿಯಲ್ಲಿ 43 ಸಾವಿರ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 23 ಲಕ್ಷ ಜನಸಂಖ್ಯೆಯ ಪೈಕಿ ಶೇ 90ರಷ್ಟು ಮಂದಿ ನಿರ್ವಸತಿಗರಾಗಿದ್ದಾರೆ ಎಂದು ತಿಳಿಸಿದೆ.

ನೆರವಿಗೆ ನಿರ್ಬಂಧ: ’ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್‌ ನಿರಾಶ್ರಿತರಿಗಾಗಿ ನಿರ್ಮಾಣ ಹಾಗೂ ಪುನರ್‌ವಸತಿ ಸಂಸ್ಥೆ’ (ಯುಎನ್‌ಆರ್‌ಡಬ್ಲ್ಯುಎ) ತನ್ನ ದೇಶದ ಒಳಗೆ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಿ ಇಸ್ರೇಲ್‌ ಸರ್ಕಾರವು ಎರಡು ಕಾನೂನುಗಳನ್ನು ಅಂಗೀಕರಿಸಿದೆ.

ಗಾಜಾದ ನಿರಾಶ್ರಿತರಿಗೆ ನೆರವು ನೀಡುತ್ತಿರುವ ಅತ್ಯಂತ ಪ್ರಮುಖ ಸೇವಾ ಸಂಸ್ಥೆ ಇದಾಗಿದೆ. ಸ್ವಯಂಸೇವಾ ಸಂಸ್ಥೆಗಳ ಮೇಲೆ ಇಸ್ರೇಲ್‌ ಸರ್ಕಾರ ಕಠಿಣ ನಿರ್ಬಂಧ ವಿಧಿಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಹೊಸ ಕಾನೂನಿನಿಂದ ಯುಎನ್‌ಆರ್‌ಡಬ್ಲ್ಯುಎ ಸಂಸ್ಥೆಯ ಜತೆಗೆ ಇಸ್ರೇಲ್‌ ಸರ್ಕಾರದ ಜತೆಗೆ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲಿದೆ. 2023ರ ಅ.7ರಂದು ಇಸ್ರೇಲ್‌ ಮೇಲೆ ನಡೆದ ದಾಳಿ ವೇಳೆ ಸಂಸ್ಥೆಯ ಕೆಲವು ಸಿಬ್ಬಂದಿ ಭಾಗಿಯಾಗಿದ್ದರು
ಎಂದು ಇಸ್ರೇಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಫಿಲಿಪ್ಪೆ ಲಜ್ಜಾರಿನಿ, ‘ಅನಿರೀಕ್ಷಿತ’ ಎಂದು ತಿಳಿಸಿದ್ದಾರೆ.

’ಕಳೆದೊಂದು ವರ್ಷದಿಂದ ಪ್ಯಾಲೇಸ್ಟಿನ್‌ನಲ್ಲಿ ಪರಿತಪಿಸುತ್ತಿರುವ ನಿರಾಶ್ರಿತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದಿದ್ದಾರೆ.

ಖಾಸೀಂ ಹಿಜ್ಬುಲ್ಲಾದ ಹೊಸ ನಾಯಕ

ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯು ಶೇಕ್‌ ನಯೀಮ್‌ ಖಾಸೀಂ ಅವರನ್ನು ಹೊಸ ನಾಯಕನನ್ನಾಗಿ ಮಂಗಳವಾರ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದೆ. ಕಳೆದ ತಿಂಗಳು ಇಸ್ರೇಲ್‌ ನಡೆಸಿದ ವಾಯುದಾಳಿಗೆ ಹಿಜ್ಬುಲ್ಲಾದ ನಾಯಕ  ಹಸನ್‌ ನಸ್ರಲ್ಲಾ ಹತ್ಯೆಯಾಗಿದ್ದ.

ಮಂಗಳವಾರ ನಡೆದ ‘ಶುರಾ ಕೌನ್ಸಿಲ್’ ಸಭೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದೆ. ಕಳೆದ ಮೂರು ದಶಕದಿಂದ ಖಾಸೀಂ ಸಂಘಟನೆ ಯಲ್ಲಿ ಉಪನಾಯಕರಾಗಿ ಗುರುತಿಸಿಕೊಂಡಿದ್ದರು. ನಸ್ರಲ್ಲಾ ನೀತಿಯಂತೆ ‘ಗೆಲುವು ಪಡೆಯುವ ತನಕ’ ಹೋರಾಟ ಮುಂದುವರಿಯಲಿದೆ ಎಂದು ಖಾಸೀಂ ಘೋಷಿಸಿದ್ದಾರೆ.

71 ವರ್ಷದ ಖಾಸೀಂ ಹಿಜ್ಬುಲ್ಲಾ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿಯೂ ಒಬ್ಬರಾಗಿದ್ದಾರೆ. ಇಸ್ರೇಲ್‌ ದಾಳಿಯಿಂದ ಹಿನ್ನಡೆ ಉಂಟಾಗಿದ್ದರೂ, ಹೋರಾಟ ಮುಂದುವರಿಸಲಾಗುವುದು ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

ಜಾಸ್ತಿ ದಿನ ಉಳಿಯಲ್ಲ: ಖಾಸೀಂ ನೇಮಕಾತಿಗೆ ಇಸ್ರೇಲ್‌ ಸೇನೆ ಕಟುವಾಗಿ ಪ್ರತಿಕ್ರಿಯಿಸಿದೆ. ‘ಇದು ತಾತ್ಕಾಲಿಕ ನೇಮಕಾತಿ, ದೀರ್ಘ ಅವಧಿಗಲ್ಲ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಯೊಯಾವ್‌ ಗಲಾಂಟ್‌ ಅವರು ಖಾಸೀಂ ಭಾವಚಿತ್ರವನ್ನು ‘ಎಕ್ಸ್‌’ನಲ್ಲಿ ಹಾಕಿ ಸಂದೇಶ ಹಾಕಿದ್ದಾರೆ. ಆ ಮೂಲಕ ಖಾಸೀಂಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.