ಎಪಿ
ಜರುಸಲೇಂ: ಗಾಜಾದಲ್ಲಿ ಇಸ್ರೇಲ್ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಖಾನ್ ಯೂನಿಸ್‌ನಲ್ಲಿ ನಿರಾಶ್ರಿತರ ಪುನರ್ವಸತಿಗಾಗಿ ಮೀಸಲಿರುವ ಸ್ಥಳದ ಕೆಫೆಟೇರಿಯಾದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಎಂದು ನಾಸಿರ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಕೇಂದ್ರ ಗಾಜಾದಲ್ಲಿರುವ ನಸೀರತ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿ ಪರಿಣಾಮ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಅಲ್–ಅವದಾ ಆಸ್ಪತ್ರೆ ತಿಳಿಸಿದೆ.
ಉತ್ತರ ಗಾಜಾಕ್ಕೆ ಇಸ್ರೇಲ್ ನೆರವು
ಟೆಲ್ ಅವೀವ್: ಉತ್ತರ ಗಾಜಾದಲ್ಲಿ ನಿರಂತರ ಆಕ್ರಮಣಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಆಹಾರ ಮತ್ತು ನೀರಿನ ನೂರಾರು ಪೊಟ್ಟಣಗಳನ್ನು ಕಳುಹಿಸಲಾಗಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ ತಿಳಿಸಿದೆ.
ಗಾಜಾಕ್ಕೆ ಮಾನವೀಯ ನೆರವು ನೀಡುವ ಜವಾಬ್ದಾರಿ ವಹಿಸಿಕೊಂಡಿರುವ ಇಸ್ರೇಲ್‌ನ ಸಂಸ್ಥೆ ಸಿಒಜಿಎಟಿ, ‘ಸೇನೆಯು ಅಕ್ಟೋಬರ್ 6ರಿಂದ ನಿರಂತರ ಕಾರ್ಯಾಚರಣೆ ನಡೆಸಿರುವ ಜಬಲಿಯಾ ಮತ್ತು ಬೈತ್ ಹನೌನ್ ಪ್ರದೇಶಗಳಿಗೆ ನೆರವು ಸಾಮಗ್ರಿಗಳನ್ನು ಕಳುಹಿಸಲಾಗಿದೆ’ ಎಂದು ತಿಳಿಸಿದೆ.
ಆಹಾರ ಮತ್ತು ತುರ್ತು ಸಾಮಗ್ರಿ ವಿತರಣೆಗೆ ಅಮೆರಿಕ ನೀಡಿದ್ದ ಗಡುವು ಮಂಗಳವಾರ ಅಂತ್ಯಗೊಳ್ಳುವ ಮೊದಲು ಇಸ್ರೇಲ್ ಈ ಕ್ರಮ ಕೈಗೊಂಡಿದೆ.
ಉತ್ತರ ಗಾಜಾದಲ್ಲಿ ಇಸ್ರೇಲ್ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಕನಿಷ್ಠ 700 ಮಂದಿ ಮೃತಪಟ್ಟಿದ್ದಾರೆ. 10,000 ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.