ADVERTISEMENT

ಇರಾನ್‌: ಖಮೇನಿ ‘ಎಕ್ಸ್’ ಖಾತೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 15:34 IST
Last Updated 28 ಅಕ್ಟೋಬರ್ 2024, 15:34 IST
ಅಯತೊಲ್ಲಾ ಅಲಿ ಖಮೇನಿ
ಅಯತೊಲ್ಲಾ ಅಲಿ ಖಮೇನಿ   

ಜೆರುಸಲೇಂ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ‘ಎಕ್ಸ್’ ಖಾತೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.

‘ನಿಯಮ ಉಲ್ಲಂಘಿಸಿದಕ್ಕಾಗಿ ಖಮೇನಿ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಕ್ಸ್‌ ತಿಳಿಸಿದೆ. ಆದರೆ, ಯಾವ ರೀತಿ ನಿಯಮ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ‘ಎಕ್ಸ್’ ನೀಡಿಲ್ಲ.

ಇರಾನ್‌ ಮೇಲೆ ಇಸ್ರೇಲ್ ಶನಿವಾರ ನೇರ ದಾಳಿ ಮಾಡಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ. ಇಸ್ರೇಲ್ ದಾಳಿಯ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ್ದ ಖಮೇನಿ, ‘ನಾವು ಸೋಲುವುದಿಲ್ಲ’ ಎಂದು ಹೇಳಿದ್ದರು.

ADVERTISEMENT

ಖಮೇನಿ ಹೆಸರಿನಲ್ಲಿರುವ ವಿವಿಧ ಖಾತೆಗಳನ್ನು ಅವರ ಕಚೇರಿಯು ನಿರ್ವಹಣೆ ಮಾಡುತ್ತದೆ. ಈ ಖಾತೆಗಳ ಮೂಲಕ ವಿವಿಧ ಭಾಷೆಗಳಲ್ಲಿ ಸಂದೇಶಗಳನ್ನು ನೀಡಲಾಗುತ್ತದೆ.

‘ಇರಾನ್‌ ಬಗ್ಗೆ ಯಹೂದಿಗಳ ಲೆಕ್ಕಾಚಾರ ತಪ್ಪಾಗಿದೆ. ಅವರಿಗೆ ಇರಾನ್‌ ಬಗ್ಗೆ ಗೊತ್ತಿಲ್ಲ. ಇರಾನ್‌ ಜನರ ಶಕ್ತಿ, ಸಾಮರ್ಥ್ಯ ಮತ್ತು ಸಮರ್ಪಣಾ ಭಾವವನ್ನು ಅರಿಯುವಲ್ಲಿ ಯಹೂದಿಗಳು ವಿಫಲರಾಗಿದ್ದಾರೆ’ ಎಂದು ಖಮೇನಿಯವರ ಖಾತೆಯಿಂದ ಭಾನುವಾರ ಪೋಸ್ಟ್‌ ಮಾಡಲಾಗಿತ್ತು.

ಖಮೇನಿಯವರ ಸಾಮಾಜಿಕ ಜಾಲತಾಣ ಖಾತೆ ಸ್ಥಗಿತ ಅಥವಾ ರದ್ದಾಗುತ್ತಿರುವುದು ಇದೇ ಮೊದಲಲ್ಲ. ಹಮಾಸ್‌ ಬಂಡುಕೋರರಿಗೆ ಬೆಂಬಲ ವ್ಯಕ್ತಪಡಿಸಿದಕ್ಕಾಗಿ ಫೆಬ್ರವರಿಯಲ್ಲಿ ಖಮೇನಿಯವರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ‘ಮೆಟಾ’ ಸಂಸ್ಥೆ ರದ್ದುಗೊಳಿಸಿತ್ತು.

ಕೆಲ ವರ್ಷಗಳಿಂದ ಇರಾನ್‌ನಲ್ಲಿ ‘ಎಕ್ಸ್’ ಮತ್ತು ‘ಫೇಸ್‌ಬುಕ್‌’ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ ಅಲ್ಲಿನ ಜನ ಖಾಸಗಿ ನೆಟ್‌ವರ್ಕ್‌ಗಳ ಮೂಲಕ ಅವುಗಳನ್ನು ಬಳಸುತ್ತಾರೆ,. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.