ADVERTISEMENT

Explainer: ಉಕ್ರೇನ್ ಮೇಲೆ ಪುಟಿನ್ ಅಣ್ವಸ್ತ್ರ ಬಳಸುವರೇ..? ತಜ್ಞರ ಅಭಿಮತ ಏನು?

ಏಜೆನ್ಸೀಸ್
Published 24 ಸೆಪ್ಟೆಂಬರ್ 2022, 7:11 IST
Last Updated 24 ಸೆಪ್ಟೆಂಬರ್ 2022, 7:11 IST
   

ಮಾಸ್ಕೊ: ರಷ್ಯಾದ 'ಪ್ರಾದೇಶಿಕ ಸಮಗ್ರತೆ'ಗೆ ಬೆದರಿಕೆ ಇದ್ದರೆ ಉಕ್ರೇನ್‌ನಲ್ಲಿ ಪರಮಾಣು ಅಸ್ತ್ರವನ್ನು ಬಳಸುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುಡುಗಿದ್ದಾರೆ. ಒಂದೊಮ್ಮೆ ಪುಟಿನ್, ಪರಮಾಣು ಅಸ್ತ್ರ ಬಳಸಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚರ್ಚೆ ನಡೆಯುತ್ತಿದೆ.

‘ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿರುವವರು, ಆ ಬಿರುಗಾಳಿ ತಮ್ಮ ಕಡೆಗೇ ತಿರುಗಬಹುದು ಎಂಬುದನ್ನು ತಿಳಿದಿರಬೇಕು’ಎಂದು ಪುಟಿನ್ ಹೇಳಿದ್ದರು. ಅಲ್ಲದೆ, ಇದು ಬೆದರಿಕೆ ತಂತ್ರ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಉಕ್ರೇನ್ ಮೇಲೆ ಏಕಾಏಕಿ ಮಿಲಿಟರಿ ದಾಳಿ ನಡೆಸಿದ ಪುಟಿನ್, ಪರಮಾಣು ಅಸ್ತ್ರವನ್ನು ಎಲ್ಲಿ ಬಳಸಿಬಿಡುತ್ತಾರೆ ಎಂಬ ಆತಂಕ ಎಲ್ಲೆಡೆ ಮನೆ ಮಾಡಿದೆ.

ADVERTISEMENT

1945ರಲ್ಲಿ ಅಮೆರಿಕವು ಜಪಾನ್ ಮೇಲೆ ಅಣು ಬಾಂಬ್ ದಾಳಿ ಬಳಿಕ ಇಲ್ಲಿಯವರೆಗೂ ಅಣ್ವಸ್ತ್ರವನ್ನು ಯಾವುದೇ ರಾಷ್ಟ್ರ ಬಳಸಿಲ್ಲ. ಆದರೆ, ಅಂತಹ ದೊಡ್ಡ ದಾಳಿಗೆ ಪುಟಿನ್ ಸಿದ್ಧರಿದ್ದಾರೆ ಎಂಬುದನ್ನು ವಿಶ್ಲೇಷಕರು ಒಪ್ಪಲು ಸಿದ್ಧರಿಲ್ಲ.

ಈ ಕುರಿತಂತೆ ಸುದ್ದಿ ಸಂಸ್ಥೆ ‘ಎಎಫ್‌ಪಿ‘ ಹಲವು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದೆ.

ರಷ್ಯಾ ಒಂದು ಅಥವಾ ಹೆಚ್ಚು ಯುದ್ಧತಂತ್ರದ ಪರಮಾಣು ಬಾಂಬ್‌ಗಳನ್ನು ಬಳಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ಇವುಗಳು 0.3 ಕಿಲೋಟನ್‌ಗಳಿಂದ 100 ಕಿಲೋಟನ್‌ಗಳಷ್ಟು ಸ್ಫೋಟಕ ಶಕ್ತಿಯ ಸಣ್ಣ ಬಾಂಬ್‌ಗಳಾಗಿವೆ, 1961ರಲ್ಲಿ ರಷ್ಯಾ ಪರೀಕ್ಷಿಸಿದ 58 ಮೆಗಾಟನ್ ಬಾಂಬ್‌ ಅಥವಾ ಅಮೆರಿಕದ ಸ್ಟ್ರಾಟೆಜಿಕ್ ವಾರ್‌ಹೆಡ್‌ನ 1.2 ಮೆಗಾಟನ್‌ಗಳಿಗೆ ಹೋಲಿಸಿದರೆ ಇವುಗಳು ಅತ್ಯಂತ ಸಣ್ಣ ಪ್ರಮಾಣದ್ದಾಗಿವೆ ಎಂದು ಅವರು ಹೇಳುತ್ತಾರೆ.

ಯುದ್ಧತಂತ್ರದ ಬಾಂಬ್‌ಗಳನ್ನು ಯುದ್ಧಭೂಮಿಯಲ್ಲಿ ಸೀಮಿತ ದಾಳಿಗೆ ವಿನ್ಯಾಸಗೊಳಿಸಲಾಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

1945ರಲ್ಲಿ ಅಮೆರಿಕ, ಹಿರೋಶಿಮಾದ ಮೇಲೆ ಹಾಕಿದ ವಿನಾಶಕಾರಿ ಪರಿಣಾಮ ಬೀರಿದ ಸಣ್ಣ ಪರಮಾಣು ಬಾಂಬ್ ಕೇವಲ 15 ಕಿಲೋಟನ್‌ಗಳ ಶಕ್ತಿ ಹೊಂದಿತ್ತು.

ಉಕ್ರೇನ್‌ನಲ್ಲಿ ಯುದ್ಧತಂತ್ರದ ಪರಮಾಣು ಬಾಂಬ್ ಅನ್ನು ಬಳಸುವುದು ರಷ್ಯಾದ ಗುರಿಯಾಗಿದೆ. ಉಕ್ರೇನ್ ಅನ್ನು ಶರಣಾಗತಿ ಅಥವಾ ಮಾತುಕತೆಗಳಿಗೆ ಒಪ್ಪುವಂತೆ ಬೆದರಿಸುವುದು ಹಾಗೂ ಆ ದೇಶದ ಪಾಶ್ಚಿಮಾತ್ಯ ಬೆಂಬಲಿಗರನ್ನು ವಿಭಜಿಸುವುದು ರಷ್ಯಾ ಉದ್ದೇಶವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ರಷ್ಯಾ ಮುಂಚೂಣಿಯಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ವಾಷಿಂಗ್ಟನ್‌ನಲ್ಲಿರುವ ಸಿಎಸ್‌ಐಎಸ್‌ ಇಂಟರ್‌ನ್ಯಾಷನಲ್ ಸೆಕ್ಯುರಿಟಿ ಪ್ರೋಗ್ರಾಂನ ಮಿಲಿಟರಿ ತಜ್ಞ ಮಾರ್ಕ್ ಕ್ಯಾನ್ಸಿಯನ್ ಹೇಳಿದ್ದಾರೆ.

20 ಮೈಲುಗಳ (32 ಕಿಲೋಮೀಟರ್) ಭೂಪ್ರದೇಶವನ್ನು ವಶಪಡಿಸಿಕೊಳ್ಳಲು 20 ಸಣ್ಣ ಪರಮಾಣು ಬಾಂಬ್‌ಗಳು ಬೇಕಾಗಬಹುದು. ಆದರೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಪರಿಚಯಿಸುವ ಮೂಲಕ ದೊಡ್ಡ ಅಪಾಯಗಳಿಗೆ ಎಡೆಮಾಡಿದಂತಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ನೀರಿನ ಮೇಲೆ ಅಥವಾ ಉಕ್ರೇನ್‌ನ ಎತ್ತರದ ಪ್ರದೇಶದಲ್ಲಿ ಪರಮಾಣು ಬಾಂಬ್ ಸ್ಫೋಟಿಸುವ ಮೂಲಕ ಕೇವಲ ಬೆದರಿಕೆಯೊಡ್ಡಿ, ಸಾವುನೋವುಗಳನ್ನು ರಷ್ಯಾ ತಪ್ಪಿಸಬಹುದು. ಒಂದೊಮ್ಮೆ, ಪುಟಿನ್ ಹೆಚ್ಚಿನ ವಿನಾಶ ಮಾಡಲು ಬಯಸಿದರೆ, ಉಕ್ರೇನ್ ಮಿಲಿಟರಿ ನೆಲೆಯ ಮೇಲೆ ದಾಳಿ ಮಾಡುವುದು ಅಥವಾ ಕೀವ್‌ನಂತಹ ನಗರ ಕೇಂದ್ರವನ್ನು ಹೊಡೆಯುವುದು ಅಥವಾ ಆ ದೇಶದ ರಾಜಕೀಯ ನಾಯಕರನ್ನು ಕೊಲ್ಲಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.