ಬೆಂಗಳೂರು: ‘ತನ್ನನ್ನು ವಂಚಕ, ಮೋಸಗಾರ ಎಂದು ಭಾರತದ ಟಿವಿ ಮಾಧ್ಯಮಗಳು ನಿರಂತರವಾಗಿ ಬಿಂಬಿಸುತ್ತಿವೆ‘ ಎಂದು ಪರಾರಿಯಾದ ಆರ್ಥಿಕ ಅಪರಾಧಿ ಹಾಗೂ ಉದ್ಯಮಿ ವಿಜಯ್ ಮಲ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ‘ನಾನೂ ಸಹ ಟಿವಿಗಳನ್ನು ನೋಡುತ್ತಿದ್ದೇನೆ. ಈ ಟಿವಿ ಮಾಧ್ಯಮಗಳು ಪದೇ ಪದೇ ನನ್ನನ್ನು ಮೋಸಗಾರ, ವಂಚಕ ಎಂದು ಬಿಂಬಿಸುತ್ತಿವೆ‘ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
‘ಕಿಂಗಫಿಶರ್ ಏರ್‌ಲೈನ್ಸ್ ಸಾಲಕ್ಕಿಂತಲೂ ಹೆಚ್ಚಿನದಾದ ನನ್ನ ಸ್ವತ್ತುಗಳನ್ನು ಭಾರತದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ನನ್ನ ಅನೇಕ ಸಾಲಗಳನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲು ಸಮರ್ಥನಿದ್ದೇನೆ ಎಂದು ನಾನು ಈಗಾಗಲೇ ಸಾಬೀತುಪಡಿಸಿದ್ದೇನೆ. ಇದರಲ್ಲಿ ವಂಚನೆ, ಮೋಸ ಏಲ್ಲಿದೆ‘ ಎಂದು ಮಲ್ಯ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಇಂದು, ಮನಿ ಲಾಂಡರಿಂಗ ತಡೆ ಕಾಯ್ದೆಯ ನ್ಯಾಯಾಲಯ ವಿಜಯ್ ಮಲ್ಯಗೆ ಸೇರಿದ ಸೆಕ್ಯೂರಿಟಿಗಳನ್ನು ಮತ್ತು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮಾರಾಟ ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ವಿಜಯ್ ಮಲ್ಯ ಅವರ 5600 ಕೋಟಿ ರೂಪಾಯಿ ಸಾಲ ವಸೂಲಾತಿಯ ಬಗ್ಗೆ ಪಿಎಂಎಲ್‌ಎ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
ದೇಶದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ಮಲ್ಯ ಸದ್ಯ ಲಂಡನ್‌ನಲ್ಲಿ ಇದ್ದುಕೊಂಡು ಕಾನೂನು ಹೋರಾಟ ನಡೆಸಿದ್ದಾರೆ. ತಮ್ಮನ್ನು ಭಾರತದ ಟಿವಿ ಚಾನೆಲ್‌ಗಳು ಕೆಟ್ಟದಾಗಿ ತೋರಿಸುತ್ತಿವೆ ಎಂದು ಈ ಹಿಂದೆಯೂ ಕೂಡ ಅವರು ಅನೇಕ ಸಾರಿ ಅಸಮಾಧಾನ ಹೊರ ಹಾಕಿದ್ದರು.
ಇದನ್ನೂ ಓದಿ:ಸತತ ಆರನೇ ಬಾರಿಯೂ ರೆಪೊ ದರ ಬದಲಿಲ್ಲ: ಆರ್ಬಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.