ADVERTISEMENT

ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌–1ಬಿ ವೀಸಾ ರದ್ದು: ವಿವೇಕ್‌ ರಾಮಸ್ವಾಮಿ

ಪಿಟಿಐ
Published 17 ಸೆಪ್ಟೆಂಬರ್ 2023, 10:25 IST
Last Updated 17 ಸೆಪ್ಟೆಂಬರ್ 2023, 10:25 IST
<div class="paragraphs"><p>ವಿವೇಕ್‌ ರಾಮಸ್ವಾಮಿ</p></div>

ವಿವೇಕ್‌ ರಾಮಸ್ವಾಮಿ

   

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಯೋಜನೆಯನ್ನು 'ಒಪ್ಪಂದದ ಗುಲಾಮಗಿರಿ’ ಎಂದು ಕರೆದಿರುವ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ವಿವೇಕ್‌ ರಾಮಸ್ವಾಮಿ, 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌–1ಬಿ ವೀಸಾಕ್ಕೆ ಅಂತ್ಯ ಕಾಣಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಎಚ್-1ಬಿ ಎಂಬುದು ವಲಸಿಗಯೇತರ ನೀಡುವ ವೀಸಾ ಆಗಿದೆ. ಅಮೆರಿಕದ ವಿವಿಧ ಕಂಪನಿಗಳು ವಿಶೇಷ ತಾಂತ್ರಿಕ ಪರಿಣತಿಯ ವಿದೇಶಿಯರನ್ನು ನೇಮಕ ಮಾಡಿಕೊಳ್ಳಲಿದ್ದು, ನೇಮಕಗೊಳ್ಳುವ ವ್ಯಕ್ತಿಯು ಈ ವೀಸಾ ಹೊಂದಿರುವುದು ಕಡ್ಡಾಯವಾಗಿದೆ. ಅಮೆರಿಕದ ಶಾಸನ ಸಭೆ 2024ನೇ ಸಾಲಿಗೆ 65,000 ಎಚ್ 1ಬಿ ವೀಸಾ ನೀಡುವ ಗುರಿ ನಿಗದಿಪಡಿಸಿತ್ತು. ರಾಮಸ್ವಾಮಿ ಅವರು ಕೂಡ 29 ಬಾರಿ ಈ ವೀಸಾ ಕಾರ್ಯಕ್ರಮವನ್ನು ಬಳಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎಚ್‌–1ಬಿ ವೀಸಾ ವ್ಯವಸ್ಥೆಯನ್ನು ‘ಕೆಟ್ಟ ವ್ಯವಸ್ಥೆ’ ಎಂದು ಕರೆದಿರುವ ವಿವೇಕ್‌ ರಾಮಸ್ವಾಮಿ, ಇದನ್ನು ಬದಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

‘ಲಾಟರಿ ಆಧರಿತ ಈ ವ್ಯವಸ್ಥೆಗೆ ಬದಲಿಯಾಗಿ ಅರ್ಹತೆ ಆಧಾರದ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಎಚ್–1ಬಿ ವೀಸಾದಿಂದ ಲಾಭ ಪಡೆದುಕೊಳ್ಳುತ್ತಿರುವುದು ಕಂಪೆನಿಗಳು ಮಾತ್ರ. ಇದು ಒಪ್ಪಂದದ ಜೀತ ಪದ್ಧತಿಯಾಗಿದೆ’ ಎಂದು ಟೀಕಿಸಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್‌ ಟ್ರಂಪ್‌ ಕೂಡ ಎಚ್‌–1ಬಿ ವೀಸಾ ರದ್ದು ಮಾಡುವುದಾಗಿ ಶಪಥ ಮಾಡಿದ್ದರು. ‘ಅಮೆರಿಕ ಫಸ್ಟ್‌’ ಎಂದು ಘೋಷಣೆ ಮಾಡಿದ್ದ ಟ್ರಂಪ್‌, ಅಮೆರಿಕದಲ್ಲಿ ಪ್ರತಿಭೆಗಳಿಗೇನು ಕಡಿಮೆಯಿಲ್ಲ ಎಂದಿದ್ದರು . ಅದಾಗ್ಯೂ ಭಾರತ–ಚೀನಾದಿಂದ ಉದ್ಯೋಗಿಗಳನ್ನು ಕರೆತಂದು ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಟೆಕ್ ಕಂಪೆನಿಗಳ ವಿರುದ್ಧ ಕಿಡಿಕಾರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.