ವಾಷಿಂಗ್ಟನ್: ಸಿಖ್ ಕಾರ್ಯಕರ್ತರ ಗುಂಪನ್ನು ಶ್ವೇತಭವನದ ಅಧಿಕಾರಿಗಳು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಅಮೆರಿಕ ಪ್ರವಾಸಕ್ಕೂ ಮುನ್ನ ಈ ಸಭೆ ನಡೆದಿದೆ.
ಅಮೆರಿಕ ನೆಲದಲ್ಲಿ ಯಾವುದೇ ದೇಶೀಯ ಆಕ್ರಮಣಕಾರಿ ಕೃತ್ಯಗಳಿಂದ ಅಮೆರಿಕನ್ನರನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಿಖ್ ನಾಯಕರೊಬ್ಬರು ತಿಳಿಸಿದ್ದಾರೆ.
ಶ್ವೇತಭವನದ ಸಂಕೀರ್ಣದಲ್ಲಿ ಗುರುವಾರ ಈ ಸಭೆ ನಡೆದಿದ್ದು, ಅಮೆರಿಕದ ಸಿಖ್ ಕಾಕಸ್ ಸಮಿತಿಯ ಸಂಸ್ಥಾಪಕ ಪ್ರೀತ್‌ಪಾಲ್ ಸಿಂಗ್, ಸಿಖ್ ಒಕ್ಕೂಟ ಮತ್ತು ಅಮೆರಿಕದ ಕಾನೂನು ರಕ್ಷಣಾ ಮತ್ತು ಶಿಕ್ಷಣ ನಿಧಿ (ಎಸ್‌ಎಎಲ್‌ಡಿಇಎಫ್) ಪ್ರತಿನಿಧಿಗಳು ಪಾಲ್ಗೊಂಡಿದ್ದರು.
‘ಸಿಖ್ ಅಮೆರಿಕನ್ನರ ಜೀವಗಳನ್ನು ರಕ್ಷಿಸಿದ್ದಕ್ಕಾಗಿ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ನಮಗೆ ಗುರುವಾರ ಸಿಕ್ಕಿತ್ತು. ನಾವು ಅವರಿಂದ ಇನ್ನಷ್ಟು ಭರವಸೆಗಳನ್ನು ನಿರೀಕ್ಷಿಸಿದ್ದೇವೆ’ ಎಂದು ಪ್ರೀತ್‌ಪಾಲ್ ಸಿಂಗ್ ತಿಳಿಸಿದ್ದಾರೆ.
ಸಿಖ್ ಕಾರ್ಯಕರ್ತರು ಮತ್ತು ಸಿಖ್ ಪ್ರತ್ಯೇಕತಾವಾದಿಗಳ ಜತೆಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆಸಿತ್ತು. ಈ ಸಭೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.