ADVERTISEMENT

ಜೋ ಬೈಡನ್‌ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿಲ್ಲ: ವಕ್ತಾರರ ಸ್ಪಷ್ಟನೆ

ಪಿಟಿಐ
Published 4 ಜುಲೈ 2024, 14:07 IST
Last Updated 4 ಜುಲೈ 2024, 14:07 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕಣದಿಂದ ಹಿಂದೆ ಸರಿಯತ್ತಿಲ್ಲ ಎಂದು ಅವರ ವಕ್ತಾರರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಹಾಲಿ ಅಧ್ಯಕ್ಷರಾಗಿರುವ ಬೈಡನ್‌, ಚುನಾವಣೆ ಕಣದಿಂದ ಹಿಂದೆ ಸರಿಯಬೇಕು ಎಂಬ ಅಭಿಪ್ರಾಯ ಡೆಮಾಕ್ರಟಿಕ್‌ ಪಕ್ಷದಲ್ಲೇ ಕೇಳಿಬಂದಿತ್ತು. ಕಳೆದ ಗುರುವಾರ ಬೈಡನ್‌ ಹಾಗೂ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ನಡುವಣ ಚರ್ಚೆಯಲ್ಲಿ ಬೈಡನ್‌ ಅವರಿಗೆ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿತ್ತು. ಇದರಿಂದ ಅವರ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಿತ್ತು.

‘ಇನ್ನೊಂದು ಅವಧಿಗೆ ಅಧ್ಯಕ್ಷನಾಗುವ ಸಾಮರ್ಥ್ಯ ಇದೆ ಎಂಬ ಭರವಸೆಯನ್ನು ತ್ವರಿತವಾಗಿ ಜನರ ಮುಂದಿಡಲು ವಿಫಲವಾದರೆ, ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದೇನೆ ಎಂದು ಬೈಡನ್‌ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ’ ಎಂದು ನ್ಯೂಯಾರ್ಜ್‌ ಟೈಮ್ಸ್‌ ಮತ್ತು ಸಿಎನ್‌ಎನ್‌ ವರದಿ ಮಾಡಿತ್ತು.

ADVERTISEMENT

ಶ್ವೇತಭವನದ ವಕ್ತಾರೆ ಕರೀನ್‌ ಜಾನ್‌ ಪಿಯರ್ ಅವರು ಮಾಧ್ಯಮ ವರದಿಗಳನ್ನು ಅಲ್ಲಗಳೆದಿದ್ದು, ‘ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಬೈಡನ್‌ ಸ್ಪಷ್ಟ ನಿಲುವು ಹೊಂದಿದ್ದು, ಕಣದಿಂದ ಹಿಂದೆ ಸರಿಯುತ್ತಿಲ್ಲ’ ಎಂದಿದ್ದಾರೆ.

‘ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಗೆಲ್ಲುವ ವಿಶ್ವಾಸವಿದೆ. ಏಕೆಂದರೆ ಡೆಮಾಕ್ರಟಿಕ್‌ ಪಕ್ಷದವರು ಒಗ್ಗಟ್ಟು ಪ್ರದರ್ಶಿಸಿದರೆ ನಾವು ಯಾಗಾಗಲೂ ಗೆಲ್ಲುತ್ತೇವೆ. 2020 ರಲ್ಲಿ ಟ್ರಂಪ್‌ ಅವರನ್ನು ಸೋಲಿಸಿದ್ದ ನಾವು, ಮುಂಬರುವ ಚುನಾವಣೆಯಲ್ಲೂ ಸೋಲಿಸುತ್ತೇವೆ’ ಎಂದು 81 ವರ್ಷದ ಬೈಡನ್ ಹೇಳಿದ್ದಾಗಿ ಮೂಲಗಳು ತಿಳಿಸಿವೆ. 

ಬೈಡನ್‌– ಟ್ರಂಪ್‌ ನಡುವಣ ಮೊದಲ ಮುಖಾಮುಖಿ ಚರ್ಚೆಯ ಬಳಿಕ ನ್ಯೂಯಾರ್ಕ್‌ ಟೈಮ್ಸ್‌ ನಡೆಸಿದ್ದ ಸಮೀಕ್ಷೆಯಲ್ಲಿ ಟ್ರಂಪ್‌ ಮೇಲುಗೈ ಸಾಧಿಸಿದ್ದರು. ಟ್ರಂಪ್‌ ಅವರು ಮುಂದಿನ ಅಧ್ಯಕ್ಷರಾಗುವರು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 49 ಮಂದಿ ಅಭಿಪ್ರಾಯಪಟ್ಟಿದ್ದರು. ಶೇ 43 ಮಂದಿ ಬೈಡನ್‌ ಪರ ಒಲವು ತೋರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.