ಲಂಡನ್: ವಿಶ್ವದಾದ್ಯಂತ2021ನೇ ಸಾಲಿನಲ್ಲಿ ಸುಮಾರು 4 ಕೋಟಿ ಮಕ್ಕಳು ದಡಾರ ಲಸಿಕೆ ವಂಚಿತರಾಗಿದ್ದಾರೆ. ಇದರ ಪರಿಣಾಮ,ಪರಿಣಾಮ ಸದ್ಯ, 10 ಲಕ್ಷ ಮಕ್ಕಳು ದಡಾರ ಸೋಂಕು ಪೀಡಿತರಾಗಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಮತ್ತು ಅಮೆರಿಕದ ಸಾಂಕ್ರಾಮಿಕ ನಿಯಂತ್ರಣ ಕೇಂದ್ರ (ಸಿಡಿಸಿ) ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ನೀಡಿದೆ.
ಕೊರೊನಾ ಸಾಂಕ್ರಾಮಿಕ ಶುರುವಾದ ಬಳಿಕ ಮಕ್ಕಳಿಗೆ ಮುಂಜಾಗ್ರತೆಯಾಗಿ ದಡಾರ ನಿರೋಧಕ ಲಸಿಕೆ ನೀಡುವ ಪ್ರಮಾಣ ತಗ್ಗಿದೆ.
ಅಧಿಕಾರಿಗಳ ಪ್ರಕಾರ, 2021ನೇ ಸಾಲಿನಲ್ಲಿ ವಿಶ್ವದಾದ್ಯಂತ 90 ಲಕ್ಷ ದಡಾರ ಸೋಂಕು ಪ್ರಕರಣಗಳು ದಾಖಲಾಗಿದ್ದರೆ, 1.28 ಲಕ್ಷ ಮಕ್ಕಳು ದಡಾರ ಸಾಂಕ್ರಾಮಿಕದಿಂದ ಮೃತಪಟ್ಟಿದ್ದಾರೆ.
ಲಸಿಕೆ ನೀಡುವುದು ಗಣನೀಯವಾಗಿ ತಗ್ಗಿರುವುದು, ಸೋಂಕು ಕಣ್ಗಾವಲು ದುರ್ಬಲವಾಗಿರುವುದು ಪ್ರಕರಣಗಳ ಏರಿಕೆಗೆ ಕಾರಣ. 20 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು, ಜಾಗತಿಕವಾಗಿ ತಕ್ಷಣದ ಅಪಾಯ ತರುವ ಸಂಗತಿಯಾಗಿದೆ ಎಂದಿದೆ.
ಸೋಂಕು ವಿರುದ್ಧ ರಕ್ಷಣೆಗೆ ಶೇ 95ರಷ್ಟು ಜನಸಂಖ್ಯೆಗೆ ಲಸಿಕೆ ನೀಡಬೇಕಿದೆ. ಸದ್ಯ ಶೇ 81ರಷ್ಟು ಮಕ್ಕಳಿಗೆ 1ನೇ ಡೋಸ್, ಶೇ 71ರಷ್ಟು ಮಕ್ಕಳಿಗೆ 2ನೇ ಡೋಸ್ ಲಸಿಕೆ ದೊರೆತಿದೆ. 2008ರ ನಂತರ ಜಾಗತಿಕವಾಗಿ ಇದು ಕಡಿಮೆ ಪ್ರಮಾಣದ್ದಾಗಿದೆ.
ದಡಾರ ಸೋಂಕು ಸಾಮಾನ್ಯವಾಗಿ ಸೋಂಕಿತರ ನೇರ ಸಂಪರ್ಕಕ್ಕೆ ಬರುವುದರಿಂದ ಅಥವಾ ಗಾಳಿಯ ಮೂಲಕ ಹರಡಲಿದೆ. ಜ್ವರ, ಮಾಂಸಖಂಡಗಳಲ್ಲಿ ನೋವು, ಮುಖ ಹಾಗೂ ಕತ್ತಿನ ಮೇಲ್ಭಾಗದಲ್ಲಿ ಚರ್ಮದಲ್ಲಿ ಕಲೆ ಮೂಡುವುದು ಇದರ ಸೂಚನೆಗಳು. ದಡಾರ ಪೀಡಿತರದಲ್ಲಿ ಮೆದುಳಿನಲ್ಲಿ ಊತ ಕಂಡುಬರುವುದು ಅಥವಾ ನಿರ್ಜಲೀಕರಣದಿಂದಾಗಿ ಸಾವು ಸಂಭವಿಸುತ್ತದೆ. ಐದು ವರ್ಷದೊಳಗಿನ ಮಕ್ಕಳು ಹಾಗೂ 30 ವರ್ಷ ಮೀರಿದ ವಯಸ್ಕರಲ್ಲಿ ಸೋಂಕಿನ ಗಂಭೀರ ಪರಿಣಾಮದ ಸಾಧ್ಯತೆಗಳು ಅಧಿಕವಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.