ಲಂಡನ್: ವಿಶ್ವದ ಮೊದಲ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾದ ಚೀನಾದ ಸೀ ಫುಡ್ ಮಾರುಕಟ್ಟೆ ಸಮೀಪದ ಪ್ರಯೋಗಾಲಯದಲ್ಲಿ ಅನುಸರಿಸಿದ್ದ ಸುರಕ್ಷತಾ ಮಾನದಂಡಗಳ ಬಗ್ಗೆ, ಕೊರೊನಾ ಸೋಂಕಿನ ಮೂಲ ಪತ್ತೆ ಮಾಡಲು ತೆರಳಿದ್ದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ತಂಡದ ಉನ್ನತ ಅಧಿಕಾರಿಯೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಈ ಕುರಿತ ಅಧಿಕಾರಿಯ ಹೇಳಿಕೆಯೊಂದು ಡ್ಯಾನಿಷ್ ಟೆಲಿವಿಷನ್ ಚಾನಲ್ ಟಿವಿ 2 ಗುರುವಾರ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿದೆ.
ರೋಗ ತಡೆ ಮತ್ತು ನಿಯಂತ್ರಣ ಕೇಂದ್ರದ ವುಹಾನ್ ಶಾಖೆ, ‘ಯಾವುದೇ ತಜ್ಞರಿಲ್ಲದೇ ಅಥವಾ ಸುರಕ್ಷತಾ ಕ್ರಮಗಳಿಲ್ಲದೇ‘ ಕೊರೊನಾ ಸೋಂಕನ್ನು ನಿಯಂತ್ರಣ ಮಾಡುತ್ತಿದೆ. ಈ ವಿಚಾರದ ಬಗ್ಗೆ ಯಾರಿಗೆ ಮಾಹಿತಿ ಇದೆ‘ ಎಂದು ವಿಶ್ವಸಂಸ್ಥೆಯ ತಜ್ಞರಲ್ಲೊಬ್ಬರಾದ ಪೀಟರ್ ಬೆನ್ ಎಂಬಾರೆಕ್ ಅವರು ಜನವರಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಹೇಳಿದ್ದರು ಎಂದು ಟಿವಿ2 ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದ ‘ದೃಶ್ಯಾವಳಿ‘ಗಳಿಂದ ಗೊತ್ತಾಗಿದೆ.
ಪ್ರಾಣಿಗಳಿಂದ ಮನುಷ್ಯರಿಗೆ ರೋಗ ಹರಡುವಿಕೆ ತಡೆ ವಿಭಾಗದ ತಜ್ಞರಾಗಿರುವ ಎಂಬಾರೆಕ್, ಕೊರೊನಾ ಮೂಲ ಪತ್ತೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕಳುಹಿಸಿದ್ದ ತಂಡದ ಸದಸ್ಯರಲ್ಲೊಬ್ಬರಾಗಿದ್ದಾರೆ.
ಆದರೆ ಕೆಲವು ತಿಂಗಳುಗಳ ನಂತರ, ವಿಶ್ವ ಆರೋಗ್ಯ ಸಂಸ್ಥೆ ವುಹಾನ್‌ನಲ್ಲಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ತನ್ನ ವರದಿಯನ್ನು ಬಿಡುಗಡೆ ಮಾಡಿದಾಗ, ಚೀನಾದ ಪ್ರಯೋಗಾಲಯದಿಂದ ವೈರಸ್ ಸೋರಿಕೆ ಅಸಂಭವ‘ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.