ನ್ಯೂಯಾರ್ಕ್: ‘ಭಾರತದ ಕಂಪನಿಯೊಂದು ತಯಾರಿಸಿರುವ ನಾಲ್ಕು ಕಲುಷಿತ ಕಫ್ ಸಿರಪ್‌ಗಳನ್ನು (ಕೆಮ್ಮು ನಿವಾರಕ) ಸೇವಿಸಿ ಪಶ್ಚಿಮ ಆಫ್ರಿಕಾದಲ್ಲಿನ ಗಾಂಬಿಯಾ ದೇಶದ 66 ಮಕ್ಕಳು ಸಾವಿಗೀಡಾಗಿದ್ದಾರೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಬುಧವಾರ ಆರೋಪಿಸಿದೆ.
ನವದೆಹಲಿ ಮೂಲದ ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸಿರುವ ಈ ಸಿರಪ್‌ಗಳನ್ನು ಮಕ್ಕಳಲ್ಲಿ ಕೆಮ್ಮು ಮತ್ತು ಶೀತನಿವಾರಕವಾಗಿ ಬಳಸಲಾಗುತ್ತಿದೆ. ಈ ಸಿರಪ್‌ಗಳು ವಿಷಕಾರಿ ಹಾಗೂ ಮಾರಣಾಂತಿಕ ರಾಸಾಯನಿಕಗಳನ್ನು ಹೊಂದಿವೆ ಎಂದು ಡಬ್ಲ್ಯುಎಚ್‌ಒ ಅಭಿಪ್ರಾಯಪಟ್ಟಿದೆ.
ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ ಹೆಸರಿನ ಈ ಎಲ್ಲಾ ಸಿರಪ್‌ಗಳನ್ನು ಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿ. ತಯಾರಿಸಿದೆ ಎಂದು ಡಬ್ಲ್ಯುಎಚ್‌ಒ ವೈದ್ಯಕೀಯ ಉತ್ಪನ್ನಗಳ ಎಚ್ಚರಿಕೆ ಪ್ರಕಟಣೆಯು ತಿಳಿಸಿದೆ.
‘ಗಾಂಬಿಯಾದಲ್ಲಿ ಗುರುತಿಸಲಾಗಿರುವ ಈ ನಾಲ್ಕು ಕಲುಷಿತ ಔಷಧಿಗಳನ್ನು ಸೇವಿಸಿದ 66 ಮಕ್ಕಳಲ್ಲಿ ತೀವ್ರತರವಾದ ಮೂತ್ರಪಿಂಡದ ಸಮಸ್ಯೆ, ವಾಂತಿ, ಹೊಟ್ಟೆನೋವು, ಅತಿಸಾರ, ತಲೆನೋವು ಕಾಣಿಸಿಕೊಂಡಿತ್ತು. ಈ ಮಕ್ಕಳ ಜೀವ ನಷ್ಟವು ಅವರ ಕುಟುಂಬಗಳ ಪಾಲಿಗೆ ದೊಡ್ಡ ನೋವು ನೀಡಿದೆ’ ಎಂದೂ ಡಬ್ಲ್ಯುಎಚ್‌ಒ ಮಹಾನಿರ್ದೇಶಕಟೆಡ್ರೊಸ್ ಅಧಾನಮ್ ಗೆಬ್ರಿಯೇಸಸ್ ಸರಣಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.