ನವದೆಹಲಿ: ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಭಾರತದಲ್ಲಿ ಉತ್ಪಾದಿಸಲಾದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದೆ.
ಮೂತ್ರಪಿಂಡಕ್ಕೆ ತೀವ್ರವಾದ ಹಾನಿ ಮಾಡುವ ಮೂಲಕ ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾದ ನಾಲ್ಕು ಔಷಧಿಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಉತ್ಪನ್ನ ಎಚ್ಚರಿಕೆಯನ್ನು ನೀಡಿದೆ.
ಕೆಮ್ಮು ಮತ್ತು ಶೀತಕ್ಕೆ ಬಳಸುವ ಈ ನಾಲ್ಕು ಸಿರಪ್‌ಗಳು ಭಾರತದ ಹರಿಯಾಣದಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯಲ್ಲಿ ಉತ್ಪಾದಿಸಲ್ಪಟ್ಟಿವೆ’ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಜಿನೀವಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿನ ಕಂಪನಿ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.
‘ಮಕ್ಕಳ ಸಾವು ಅವರ ಕುಟುಂಬಗಳಿಗೆ ಹೃದಯ ವಿದ್ರಾವಕ ವಿಷಯವಾಗಿದೆ’ಎಂದು ಗೆಬ್ರೆಯೆಸಸ್ ನೋವು ವ್ಯಕ್ತಪಡಿಸಿದರು.
ಕಲುಷಿತ ಕೆಮ್ಮಿನ ಔಷಧಿಗಳು ಸದ್ಯ ಗ್ಯಾಂಬಿಯಾದಲ್ಲಿ ಮಾತ್ರ ಪತ್ತೆಯಾಗಿವೆ. ಆದರೆ, ಇತರೆ ದೇಶಗಳಿಗೂ ಅದೇ ಕಂಪನಿಯ ಉತ್ಪನ್ನಗಳು ವಿತರಿಸಲ್ಪಟ್ಟಿರುವುದರಿಂದ ಎಚ್ಚರವಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.
ಪ್ರೋಮೆಥಾಜಿನ್ ಓರಲ್ ಸಲ್ಯೂಷನ್, ಕೋಫೆಕ್ಸ್‌ಮಾಲಿನ್ ಮಕ್ಕಳ ಕೆಮ್ಮಿನ ಸಿರಪ್, ಮ್ಯಾಕೋಫ್ ಮಕ್ಕಳ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಔಷಧಿಗಳಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯ ಪ್ರಕಾರ, ನಾಲ್ಕೂ ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಅವುಗಳು ಅಧಿಕ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಒಳಗೊಂಡಿವೆ ಎಂಬುದು ಖಚಿತಪಟ್ಟಿದೆ. ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಯಾರಕರು ವಿಶ್ವ ಆರೋಗ್ಯ ಸಂಸ್ಥೆಗೆ ಖಾತರಿ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.