ನ್ಯೂಯಾರ್ಕ್/ಜಿನಿವಾ: ‘ಕೋವಿಡ್ ಲಸಿಕೆಯ ತುರ್ತು ಬಳಕೆ ಪಟ್ಟಿಯಲ್ಲಿ(ಇಯುಎಲ್) ಕೋವ್ಯಾಕ್ಸಿನ್ ಲಸಿಕೆಯನ್ನು ಸೇರಿಸಲು ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ’ ಎಂದು ವಿಶ್ವಆರೋಗ್ಯ ಸಂಸ್ಥೆಯು ಭಾರತ್ ಬಯೋಟೆಕ್‌ಗೆ ತಿಳಿಸಿದೆ.
ಕೋವಿಡ್ ಲಸಿಕೆಯ ತುರ್ತು ಬಳಕೆ ಪಟ್ಟಿಯಲ್ಲಿ ಕೋವಾಕ್ಸಿನ್ ಸೇರಿಸಲು ಭಾರತ್ ಬಯೋಟೆಕ್ ಆಸಕ್ತಿ ವ್ಯಕ್ತಪಡಿಸಿದ್ದು ಈ ಸಂಬಂಧ ಏಪ್ರಿಲ್ 19ರಂದು ಅರ್ಜಿ ಸಲ್ಲಿಸಿದೆ. ಆದರೆ, ಇದಕ್ಕಾಗಿ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಮೇ–ಜೂನ್ ತಿಂಗಳಲ್ಲಿ ನಡೆಸುವ ಸಾಧ್ಯತೆಗಳಿವೆ’ ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್‌ನಲ್ಲಿ ಹಾಕಲಾದ ದಾಖಲೆಯೊಂದರಲ್ಲಿ ಹೇಳಲಾಗಿದೆ.
‘ಈಗಾಗಲೇ ಭಾರತ್ ಬಯೋಟೆಕ್ ಈ ಸಂಬಂಧ ಕೆಲವೊಂದು ದಾಖಲೆಗಳನ್ನು ಸಲ್ಲಿಸಿದೆ. ಈ ದಾಖಲೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ಬೇಕಾಗಿರುವ ಅಂಶಗಳಿದ್ದರೆ, ವಿಶ್ವಸಂಸ್ಥೆಯೇ ಈ ಬಗ್ಗೆ ಫಲಿತಾಂಶವನ್ನು ಪ್ರಕಟಿಸಲಿದೆ. ಲಸಿಕೆ ಉತ್ಪಾದಕರು ಸಲ್ಲಿಸಿರುವ ದಾಖಲೆಗಳ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಳ್ಳಲಾಗುವುದು’ ಎಂದು ವಿಶ್ವಸಂಸ್ಥೆ ಹೇಳಿದೆ.
‘ಕೋವ್ಯಾಕ್ಸಿನ್‌ಗೆ ಸಂಬಂಧಿಸಿದ ಶೇಕಡ 90ರಷ್ಟು ದಾಖಲೆಗಳನ್ನು ಡಬ್ಲ್ಯೂಎಚ್‌ಒಗೆ ಸಲ್ಲಿಸಲಾಗಿದೆ. ಇನ್ನುಳಿದ ದಾಖಲೆಗಳನ್ನು ಜೂನ್ ತಿಂಗಳಲ್ಲಿ ಸಲ್ಲಿಸಲಾಗುವುದು’ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ಹೇಳಿದೆ.
‘ಕೋವ್ಯಾಕ್ಸಿನ್ ತುರ್ತು ಬಳಕೆಗೆ ಈಗಾಗಲೇ 11 ರಾಷ್ಟ್ರಗಳು ಅನುಮೋದನೆ ನೀಡಿದೆ. ವಿವಿಧ ರಾಷ್ಟ್ರಗಳ 11 ಕಂಪನಿಗಳು ಕೋವ್ಯಾಕ್ಸಿನ್ಬಗ್ಗೆ ಆಸಕ್ತಿ ತೋರಿವೆ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಇದಕ್ಕೆ ಅನುಮೋದನೆ ಸಿಗಬಹುದು’ ಎಂದು ಕೇಂದ್ರ ಸರ್ಕಾರದೊಂದಿಗಿನ ಸಭೆಯ ವೇಳೆ ಸಂಸ್ಥೆಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.