ADVERTISEMENT

ಕೃತಕ ಸಿಹಿಕಾರಕ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ– ಡಬ್ಲ್ಯುಎಚ್‌ಒ

​ಪ್ರಜಾವಾಣಿ ವಾರ್ತೆ
Published 16 ಮೇ 2023, 13:36 IST
Last Updated 16 ಮೇ 2023, 13:36 IST
.
.   

ಜಿನೆವಾ: ‘ಬಹಳಷ್ಟು ಉತ್ಪನ್ನಗಳಲ್ಲಿ ಸಕ್ಕರೆಯ ಬದಲು ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತಿದೆ. ಇದು ದೇಹ ತೂಕ ತಗ್ಗಿಸುವುದಕ್ಕೆ ಸಹಕಾರಿಯಾಗಲಾರದು. ಬದಲಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ.

‘ಸದ್ಯ ಲಭ್ಯವಿರುವ ಸಂಶೋಧನಾ ವರದಿಗಳ ‍ಪ್ರಕಾರ ವಯಸ್ಕರು ಹಾಗೂ ಮಕ್ಕಳ ದೇಹದೊಳಗೆ ಅನಗತ್ಯ ಕೊಬ್ಬು ಶೇಖರಣೆಯಾಗದಂತೆ ತಡೆಯಲು ಕೃತಕ ಸಿಹಿಕಾರಕಗಳು ಸಹಕಾರಿಯಾಗಲಾರವು. ಇಂತಹ ಪದಾರ್ಥಗಳ ಸೇವನೆಯಿಂದ ಟೈಪ್‌–2 ಡಯಾಬಿಟಿಸ್‌, ಹೃದಯ ರಕ್ತನಾಳದ ಕಾಯಿಲೆಗಳು ಹಾಗೂ ವಯಸ್ಕರಲ್ಲಿ ಮರಣದಂತಹ ಅಪಾಯ ಹೆಚ್ಚಿರುತ್ತದೆ’ ಎಂದಿದೆ.

ದೇಹ ತೂಕ ಹೆಚ್ಚಾಗದಂತೆ ತಡೆಯಲು ಜನರು ಡಯಟ್‌ ಸೋಡಾ ಸೇರಿದಂತೆ ಇನ್ನಿತರೆ ಪಾನೀಯ ಹಾಗೂ ಪದಾರ್ಥಗಳ ಮೊರೆ ಹೋಗುತ್ತಾರೆ. ಆ ಮೂಲಕ ಪ್ರತಿ ನಿತ್ಯವೂ ಲಕ್ಷಾಂತರ ಮಂದಿಯು ಕೃತಕ ಸಿಹಿಕಾರಕಗಳನ್ನು ದೇಹಕ್ಕೆ ತೆಗೆದುಕೊಳ್ಳುತ್ತಾರೆ. ಇಂತಹ ಪದಾರ್ಥಗಳು ಎಷ್ಟರ ಮಟ್ಟಿಗೆ ಆರೋಗ್ಯಕರ  ಎಂಬುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ADVERTISEMENT

‘ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕಗಳ ಸೇವನೆಯು ದೀರ್ಘಾವಧಿಯಲ್ಲಿ ದೇಹ ತೂಕ ನಿಯಂತ್ರಿಸುವುದಕ್ಕೆ ನೆರವಾಗುವುದಿಲ್ಲ. ಹಣ್ಣುಗಳು ಸೇರಿದಂತೆ ಸಕ್ಕರೆಯ ಅಂಶಗಳನ್ನೊಳಗೊಂಡಂತಹ ನೈಸರ್ಗಿಕ ದತ್ತ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು’ ಎಂದು ಡಬ್ಲ್ಯುಎಚ್‌ಒನ ಪೌಷ್ಟಿಕಾಂಶ ಮತ್ತು ಆಹಾರ ಸುರಕ್ಷತಾ ವಿಭಾಗದ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ತಿಳಿಸಿದ್ದಾರೆ. 

‘ತಂಪು ಪಾನೀಯ ಹಾಗೂ ಇತರೆ ಆಹಾರ ಪದಾರ್ಥಗಳಲ್ಲಿ ಅಸೆಸಲ್ಫೇಮ್‌–ಕೆ, ಆಸ್ಪರ್ಟಮೆ, ಅಡ್ವಾಂಟಮೆ, ಸೈಕ್ಲಾಮೇಟ್ಸ್‌, ನಿಯೊಟೇಮ್‌, ಸ್ಯಾಚರಿನ್‌, ಸುಕ್ರಾಲೋಸ್‌, ಸ್ಟೆವಿಯಾ ಮತ್ತು ಸ್ಟೆವಿಯಾ ಡೆರಿವೇಟಿವ್ಸ್‌ನಂತಹ ಸಿಹಿಕಾರಕಗಳನ್ನು ಅಗಾಧ ಪ್ರಮಾಣದಲ್ಲಿ ಸದ್ಯ ಬಳಕೆ ಮಾಡಲಾಗುತ್ತಿದೆ’ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.