ADVERTISEMENT

WikiLeaks | ತವರು ನೆಲಕ್ಕೆ ಬಂದಿಳಿದ ಅಸ್ಸಾಂಜೆ

ಏಜೆನ್ಸೀಸ್
Published 26 ಜೂನ್ 2024, 14:14 IST
Last Updated 26 ಜೂನ್ 2024, 14:14 IST
<div class="paragraphs"><p>ಜೂಲಿಯನ್ ಅಸ್ಸಾಂಜೆ</p></div>

ಜೂಲಿಯನ್ ಅಸ್ಸಾಂಜೆ

   

(ರಾಯಿಟರ್ಸ್ ಚಿತ್ರ)

ಕ್ಯಾನ್‌ಬೆರಾ: ದಶಕದ ಕಾನೂನು ಹೋರಾಟದ ನಂತರ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಬುಧವಾರ ತಮ್ಮ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಮರಳಿದರು.

ADVERTISEMENT

ಅಮೆರಿಕದ ಸೇನಾ ರಹಸ್ಯ ಮಾಹಿತಿಗಳನ್ನು ಅಕ್ರಮವಾಗಿ ಪಡೆದು ಪ್ರಕಟಿಸಿದ ಬೇಹುಗಾರಿಕೆ ಆರೋಪದ ಪ್ರಕರಣದಲ್ಲಿ ಅಸ್ಸಾಂಜೆ ಬಂಧಿತರಾಗಿದ್ದರು. ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್‌ಗಳೊಂದಿಗಿನ ಒಪ್ಪಂದದ ಅನುಸಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಕೆಲವು ಗಂಟೆಗಳ ನಂತರ ಅಸ್ಸಾಂಜೆ ಅವರಿಗೆ ಸೈಪಾನ್‌ನಿಂದ ತಮ್ಮ ತಾಯ್ನಾಡಿಗೆ ಮರಳಲು ಅನುಮತಿಸಲಾಯಿತು.

52 ವರ್ಷದ ಅಸ್ಸಾಂಜೆ ಅವರು ಉತ್ತರ ಮರಿಯಾನಾ ದ್ವೀಪಗಳ ರಾಜಧಾನಿ ಸೈಪಾನ್‌ನಲ್ಲಿರುವ ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ತಪ್ಪೊಪ್ಪಿಗೆಯ ಮನವಿ ಸಲ್ಲಿಸಿದರು. ಇದರೊಂದಿಗೆ ದಶಕದಿಂದ ಅವರು ಎದುರಿಸುತ್ತಿದ್ದ ಅಂತರರಾಷ್ಟ್ರೀಯ ಪಿತೂರಿಯ ಕ್ರಿಮಿನಲ್ ಪ್ರಕರಣವು ಅತ್ಯಂತ ಅಸಾಮಾನ್ಯ ಸನ್ನಿವೇಶದಲ್ಲಿ ಮತ್ತು ಆಶ್ಚರ್ಯಕರ ರೀತಿಯಲ್ಲಿ ಅಂತ್ಯ ಕಂಡಿತು.

ಸೋಮವಾರ ರಾತ್ರಿ ಲಂಡನ್ ಜೈಲಿನಿಂದ ಬಿಡುಗಡೆಯಾಗಿದ್ದ ಅಸ್ಸಾಂಜೆ ಅವರು ಪ್ರಯಾಣಿಸುತ್ತಿದ್ದ ಚಾರ್ಟರ್‌ ವಿಮಾನವನ್ನು ಇಂಧನ ಭರ್ತಿಗಾಗಿ ಮಂಗಳವಾರ ಬ್ಯಾಂಕಾಕ್‌ನಲ್ಲಿ ಇಳಿಸಲಾಗಿತ್ತು. ಇಲ್ಲಿಂದ ಬುಧವಾರ ಸೈಪಾನ್‌ ತಲುಪಿದ ಅಸ್ಸಾಂಜೆ, ನ್ಯಾಯಾಲಯದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅದೇ ವಿಮಾನದಲ್ಲಿ ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾ ಸೇರಿದ್ದಾರೆ.

ಸೈಪಾನ್ ನ್ಯಾಯಾಲಯದ ಹೊರಗೆ ಮಾತನಾಡಿದ ಅಸ್ಸಾಂಜೆಯವರ ವಕೀಲರಾದ ಜೆನ್ನಿಫರ್ ರಾಬಿನ್ಸನ್ ಅವರು, ‘ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರ ರಾಜನೀತಿ, ಅವರ ಮುತ್ಸದ್ದಿತನದ ನಾಯಕತ್ವ ಹಾಗೂ ಅವರ ರಾಜತಾಂತ್ರಿಕತೆಯಿಂದ ಅಸ್ಸಾಂಜೆಯವರ ಬಿಡುಗಡೆಯನ್ನು ಸಾಧ್ಯವಾಗಿಸಿತು’ ಎಂದು ಧನ್ಯವಾದ ಸಲ್ಲಿಸಿದರು. 

ಅಸ್ಸಾಂಜೆ ಕ್ಯಾನ್‌ಬೆರಾದಿಂದ ಎಲ್ಲಿಗೆ ಹೋಗಲಿದ್ದಾರೆ ಮತ್ತು ಅವರ ಭವಿಷ್ಯದ ಯೋಜನಗಳೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.