ADVERTISEMENT

ಬೇಹುಗಾರಿಕೆ ಪ್ರಕರಣ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಿಡುಗಡೆ

ಪಿಟಿಐ
Published 25 ಜೂನ್ 2024, 2:34 IST
Last Updated 25 ಜೂನ್ 2024, 2:34 IST
<div class="paragraphs"><p>ಜೂಲಿಯನ್ ಅಸ್ಸಾಂಜೆ</p></div>

ಜೂಲಿಯನ್ ಅಸ್ಸಾಂಜೆ

   

ತಪ್ಪೊಪ್ಪಿಗೆ: ಅಸ್ಸಾಂಜೆ ಇಂದು ನ್ಯಾಯಾಲಯಕ್ಕೆ ಹಾಜರು?ಲಂಡನ್‌: ಬೇಹುಗಾರಿಕೆ ಆರೋಪದಲ್ಲಿ ಅಮೆರಿಕಕ್ಕೆ ಹಸ್ತಾಂತರಿಸುವುದರ ವಿರುದ್ಧ ದಶಕದಿಂದ ಹೋರಾಟ ನಡೆಸುತ್ತಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸ್ಸಾಂಜೆ ಅವರು ಅಮೆರಿಕ ನ್ಯಾಯಾಂಗ ಇಲಾಖೆಯೊಂದಿಗಿನ ಒಪ್ಪಂದದ ಅನುಸಾರ ಜೈಲಿನಿಂದ ಬಿಡುಗಡೆಯಾಗಿ, ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. 

ಆಸ್ಟ್ರೇಲಿಯಾದ ಪ್ರಜೆ, 52 ವರ್ಷದ ಅಸ್ಸಾಂಜೆ ಅವರನ್ನು ಸೋಮವಾರ ರಾತ್ರಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಸ್ಸಾಂಜೆ ಅವರು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಎಂದು ಬ್ರಿಟನ್‌ ಮಾಧ್ಯಮ, ಅಮೆರಿಕ ನ್ಯಾಯಾಂಗ ಇಲಾಖೆಯ ಪತ್ರ ಉಲ್ಲೇಖಿಸಿ ವರದಿ ಮಾಡಿವೆ.

ADVERTISEMENT

ಈಕ್ವೆಡಾರ್ ರಾಯಭಾರ ಕಚೇರಿಯ ಆಶ್ರಯ ಪಡೆದಿದ್ದ ಅವರನ್ನು ಕಸ್ಟಡಿಗೆ ಪಡೆದು, 2019ರಿಂದ ಲಂಡನ್‌ನ ಬೆಲ್‌ಮಾರ್ಷ್ ಜೈಲಿನಲ್ಲಿ ಇರಿಸಲಾಗಿತ್ತು. 

ರಾಷ್ಟ್ರೀಯ ರಕ್ಷಣಾ ಮಾಹಿತಿ ಪಡೆಯಲು ಮತ್ತು ಬಹಿರಂಗಪಡಿಸಲು ಪಿತೂರಿ ನಡೆಸಿದ್ದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು. ಇದರಲ್ಲಿ ಅವರ ತಪ್ಪು ಸಾಬೀತಾಗಿದ್ದು, 62 ತಿಂಗಳುಗಳ ಶಿಕ್ಷೆ ವಿಧಿಸಲಾಗಿತ್ತು. ನ್ಯಾಯಾಲಯದ ದಾಖಲೆಗಳ ಪ್ರಕಾರ, ಅಸ್ಸಾಂಜೆ ಈಗಾಗಲೇ ಬ್ರಿಟನ್‌ ಜೈಲಿನಲ್ಲಿ ಶಿಕ್ಷೆಯ ಅವಧಿಯನ್ನು ಕಳೆದಿದ್ದಾರೆ. 

ತಪ್ಪೊಪ್ಪಿಗೆಯ ಮನವಿಯನ್ನು ನ್ಯಾಯಾಧೀಶರು ಔಪಚಾರಿಕವಾಗಿ ಒಪ್ಪಿಕೊಂಡ ನಂತರ, ಅಸ್ಸಾಂಜೆ ಅವರು ಆಸ್ಟ್ರೇಲಿಯಾಕ್ಕೆ ಮರಳಲು ಅನುಮತಿಸಲಾಗಿದೆ. ಅಸ್ಸಾಂಜೆ ‍ಪತ್ನಿ ಹಾಗೂ ಮಕ್ಕಳು ಈಗಾಗಲೇ ಬ್ರಿಟನ್‌ ತೊರೆದು, ಅಸ್ಸಾಂಜೆಯವರನ್ನು ಸ್ವಾಗತಿಸಲು ಆಸ್ಟ್ರೇಲಿಯಾ ಸೇರಿದ್ದಾರೆ.    

ಅಸ್ಸಾಂಜೆ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ ಬೆಲ್‌ಮಾರ್ಷ್ ತೊರೆದು, ಸ್ಟಾನ್‌ಸ್ಟೆಡ್ ಏರ್‌ಪೋರ್ಟ್‌ನಲ್ಲಿ ವಿಮಾನ ಏರುವ ಮೂಲಕ ಲಂಡನ್‌ನಿಂದ ನಿರ್ಗಮಿಸಿದ ಮಾಹಿತಿಯನ್ನು ‘ಎಕ್ಸ್‌’ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. 

ಅಸ್ಸಾಂಜೆ ಅವರು ದಿನದ 23 ತಾಸು ಪ್ರತ್ಯೇಕವಾಸದಲ್ಲಿ 2X3 ಮೀಟರ್‌ ಅಳತೆಯ ಜೈಲು ಕೋಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಅವಧಿಯನ್ನು ಕಳೆದಿದ್ದು, ಶೀಘ್ರವೇ ಅವರು ಸ್ಟೆಲ್ಲಾ ಅಸ್ಸಾಂಜೆ ಮತ್ತು ಅವರ ಮಕ್ಕಳನ್ನು ಕೂಡಿಕೊಳ್ಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 

ತನ್ನ ಪತಿ ಸೋಮವಾರ ಕಾರಿನಲ್ಲಿ ಪ್ರಯಾಣಿಸಿ, ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದಿಂದ ವಿಡಿಯೊ ಕರೆ ಮಾಡುತ್ತಿರುವ ಮತ್ತು ವಿಮಾನವನ್ನು ಏರುತ್ತಿರುವ ಚಿತ್ರವನ್ನು ಸ್ಟೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

‘ಜೂಲಿಯನ್ ಸ್ವತಂತ್ರರಾಗಿದ್ದಾರೆ!!!! ನಿಮಗೆ ನಮ್ಮ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳಲ್ಲಿ ಸಾಧ್ಯವಿಲ್ಲ. ಹೌದು ಇದನ್ನು ನನಸಾಗಿಸಲು ವರ್ಷಗಳಿಂದ ಸಜ್ಜುಗೊಳಿಸಿದ್ದೀರಿ. ಧನ್ಯವಾದಗಳು. ಧನ್ಯವಾದಗಳು. ಧನ್ಯವಾದಗಳು’ ಎಂದು ಸ್ಟೆಲ್ಲಾ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ .

ತಪ್ಪೊಪ್ಪಿಗೆ: ಅಸ್ಸಾಂಜೆ ಇಂದು ನ್ಯಾಯಾಲಯಕ್ಕೆ ಹಾಜರು?
ಬ್ಯಾಂಕಾಕ್‌: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಪ್ರಯಾಣಿಸುತ್ತಿರುವ ವಿಮಾನವು ಮಂಗಳವಾರ ಬ್ಯಾಂಕಾಕ್‌ನಲ್ಲಿ ಇಂಧನ ಭರ್ತಿಗಾಗಿ ಇಳಿಯಿತು. ಅಸ್ಸಾಂಜೆ ಅವರ ಪತ್ನಿ ಸ್ಟೆಲ್ಲಾ ಅವರು ತಮ್ಮ ಪತಿ ಪ್ರಯಾಣಿಸುತ್ತಿರುವ ಚಾರ್ಟರ್ಡ್ ವಿಮಾನವು ಲಂಡನ್‌ನಿಂದ ಹೊರಟು  ಡಾನ್ ಮುವಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿರುವುದನ್ನು ಖಚಿತಪಡಿಸಿದ್ದಾರೆ. ವರ್ಗೀಕೃತ ದಾಖಲೆಗಳ ಸಂಗ್ರಹಿಸಿ ಪ್ರಕಟಿಸಿದ ಬೇಹುಗಾರಿಕೆ ಆರೋಪದ ಪ್ರಕರಣದಲ್ಲಿ ಅಮೆರಿಕ ಸರ್ಕಾರಕ್ಕೆ ನೀಡಿರುವ ತಪ್ಪೊಪ್ಪಿಗೆಯ ಪತ್ರದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಸ್ಸಾಂಜೆ ಅವರು ಲಂಡನ್‌ನಿಂದ ಪ್ರಯಾಣ ಆರಂಭಿಸಿದ್ದಾರೆ.  ವಿಮಾನವು ಉತ್ತರ ಮರಿಯಾನಾ ದ್ವೀಪಗಳ ರಾಜಧಾನಿ ಸೈಪಾನ್‌ ತಲುಪಲಿದೆ. ಪೆಸಿಫಿಕ್‌ನಲ್ಲಿರುವ ಅಮೆರಿಕದ ಕಾಮನ್‌ವೆಲ್ತ್‌ ನ್ಯಾಯಾಲಯಕ್ಕೆ ಅಸ್ಸಾಂಜೆ ಬುಧವಾರ ಹಾಜರಾಗುವ ನಿರೀಕ್ಷೆಯಿದೆ ಎಂದು ಅಲ್ಲಿನ ಅಧಿಕಾರಿಗಳು ‘ಅಸೋಸಿಯೇಟೆಡ್ ಪ್ರೆಸ್‌’ಗೆ ತಿಳಿಸಿದ್ದಾರೆ. ‘ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಪಡೆದುಕೊಳ್ಳಲು ಮತ್ತು ಪ್ರಸಾರ ಮಾಡಲು ಪಿತೂರಿ ನಡೆಸಿದ ಬೇಹುಗಾರಿಕೆ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿ ತಪ್ಪೊಪ್ಪಿಗೆ ಸಲ್ಲಿಸಲಿದ್ದಾರೆ ಎನ್ನುವುದನ್ನು ನಿರೀಕ್ಷಿಸಲಾಗಿದೆ’ ಎಂದು ಅಮೆರಿಕ ನ್ಯಾಯಾಂಗ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದೆ. ಅಸ್ಸಾಂಜೆ ಅವರು ತಪ್ಪೊಪ್ಪಿಗೆಯ ಮನವಿ ಮತ್ತು ಶಿಕ್ಷೆಯ ನಂತರ ತನ್ನ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಮರಳುವ ನಿರೀಕ್ಷೆಯಿದೆ. ಅಮೆರಿಕಕ್ಕೆ ಪ್ರಯಾಣಿಸಲು ಅಸ್ಸಾಂಜೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಆಸ್ಟ್ರೇಲಿಯಾದ ಮಿತ್ರರಾಷ್ಟ್ರ ಸೈಪಾನ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ‘ನ್ಯಾಯಾಧೀಶರು ಆದೇಶ ಪ್ರತಿಗೆ ಸಹಿ ಹಾಕಿದ ನಂತರ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲಾಗುವುದು’ ಎಂದು ಸ್ಟೆಲ್ಲಾ ಅವರು ಆಸ್ಟ್ರೇಲಿಯಾದಿಂದ ‘ಬಿಬಿಸಿ’ಗೆ ತಿಳಿಸಿದ್ದಾರೆ. ಅಸ್ಸಾಂಜೆ ಅವರ ವಕೀಲರೂ ಆದ ಸ್ಟೆಲ್ಲಾ 2022ರಲ್ಲಿ ಅಸ್ಸಾಂಜೆ ಜೈಲಿನಲ್ಲಿರುವಾಗಲೇ ಅವರನ್ನು ವಿವಾಹವಾಗಿದ್ದಾರೆ. ಅಸ್ಸಾಂಜೆ ಅವರನ್ನು ವಿಮಾನದಲ್ಲಿ ಕರೆತರಲು ಸುಮಾರು ₹4.17 ಕೋಟಿ (5 ಲಕ್ಷ ಡಾಲರ್‌) ವೆಚ್ಚವಾಗುತ್ತಿದ್ದು ಅದನ್ನು ಪಾವತಿಸಲು ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಸ್ಟೆಲ್ಲಾ ಬ್ರಿಟನ್ನಿನ ಸುದ್ದಿಸಂಸ್ಥೆ ‘ಪಿಎ’ಗೆ ತಿಳಿಸಿದ್ದಾರೆ. ಅಸ್ಸಾಂಜೆ ಅವರು ಪತ್ರಕರ್ತರಾಗಿ ಅಮೆರಿಕದ ಮಿಲಿಟರಿ ಪ್ರಮಾದಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಪತ್ರಿಕಾಸ್ವಾತಂತ್ರ್ಯ ಪರ ವಾದಿಸುವವರು ಪ್ರತಿಪಾದಿಸಿದ್ದಾರೆ. ತನಿಖಾಧಿಕಾರಿಗಳು ಇದಕ್ಕೆ ವ್ಯತಿರಿಕ್ತವಾಗಿ ಅಸ್ಸಾಂಜೆ ಅವರ ಕ್ರಮಗಳು ಸೂಕ್ಷ್ಮ ಮಾಹಿತಿ ರಕ್ಷಣೆ ಕಾನೂನುಗಳನ್ನು ಉಲ್ಲಂಘಿಸಿವೆ ಅಲ್ಲದೆ ದೇಶದ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಪದೇ ಪದೇ ಪ್ರತಿಪಾದಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.