ಲಾಹೋರ್: ಕಳೆದಮಾರ್ಚ್‌ನಲ್ಲಿ ರಾಜಕೀಯ ಪ್ರಕ್ಷುಬ್ಧತೆ ವೇಳೆ ತಮ್ಮ ಸರ್ಕಾರ ಬೆಂಬಲಿಸಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರಿಗೆ ಪ್ರತಿಯಾಗಿ ಮಾಜಿ ಪ್ರಧಾನಿ ‘ಲಾಭದಾಯಕ ಕೊಡುಗೆ’ ನೀಡಿದ್ದಾರೆ ಎಂಬ ಐಎಸ್‌ಐ ಮುಖ್ಯಸ್ಥರ ಹೇಳಿಕೆಗೆ ಇಮ್ರಾನ್ ಖಾನ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ದೇಶ ಹಾಗೂ ಐಎಸ್‌ಐ ಸಂಸ್ಥೆಗೆ ಹಾನಿ ಮಾಡಲು ಬಯಸದ ಕಾರಣ ಮೌನ ವಹಿಸುವುದಾಗಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ.
ಅವಧಿ ಪೂರ್ವ ಚುನಾವಣೆಗೆ ಆಗ್ರಹಿಸಿ ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ನಂತರ ಲಾಹೋರ್‌ನ ಪ್ರಸಿದ್ಧ ಲಿಬರ್ಟಿ ಚೌಕ್‌ನಲ್ಲಿ ತಮ್ಮ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್, ‘ಈ ಮೆರವಣಿಗೆ ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ಆದರೆ, ನಿಜವಾದ ಸ್ವಾತಂತ್ರ್ಯ ಪಡೆಯಲು. ಎಲ್ಲಾ ನಿರ್ಧಾರಗಳನ್ನು ಪಾಕಿಸ್ತಾನದಲ್ಲಿ ಮಾಡಲಾಗಿದೆ ಹೊರತು ಲಂಡನ್ ಅಥವಾ ವಾಷಿಂಗ್ಟನ್‌ನಲ್ಲಿ ಅಲ್ಲ ಎಂದು ಖಚಿತಪಡಿಸುತ್ತೇನೆ’ ಎಂದು ತಿಳಿಸಿದರು.
‘ಪಾಕಿಸ್ತಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡುವುದು ನನ್ನ ಏಕೈಕ ಗುರಿ’ ಎಂದು ಖಾನ್ ಹೇಳಿದರು.
ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ ಅವರ ಆರೋಪಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ತಳ್ಳಿ ಹಾಕಿದ ಇಮ್ರಾನ್, ‘ಅವರು ಇಮ್ರಾನ್ ಖಾನ್ ಬಗ್ಗೆ ಮಾತ್ರ ಮಾತನಾಡಿದ್ದು,ಸರ್ಕಾರದಲ್ಲಿರುವ ಕಳ್ಳರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ’ ಎಂದರು.
‘ಸಂಸ್ಥೆ ಮತ್ತು ದೇಶಕ್ಕಾಗಿ ಮೌನವಾಗಿರುತ್ತೇನೆ. ನನ್ನ ದೇಶಕ್ಕೆ ಹಾನಿ ಮಾಡಲು ಬಯಸುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.