ನ್ಯೂಯಾರ್ಕ್: ನವೀನ ಚಿಂತನೆ, ಸಂಶೋಧನೆಗಳ ಮೂಲಕ ಹವಾಮಾನ ಬದಲಾವಣೆ ಮತ್ತು ನೀರಿನ ಕೊರತೆಯ ನಿವಾರಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ರೂಪಿಸಲು ಇಂದಿನ ಯುವ ಜನಾಂಗ ಸಿದ್ಧತೆ ನಡೆಸುತ್ತಿದೆ ಎಂದು ಪೆಪ್ಸಿಕೊ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರ ಸೇಫ್ ವಾಟರ್ ನೆಟ್‌ವರ್ಕ್ ಸಂಸ್ಥೆ 'ವಾಟರ್ ಅಂಡ್ ಕ್ಲೈಮೇಟ್ ಚೇಂಜ್: ರಿಸ್ಕ್ ಅಂಡ್ ರೆಸಿಲಿಯನ್ಸ್' ಕುರಿತು ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹವಾಮಾನ ಬದಲಾವಣೆಯಂತಹ ವಿಷಯದಲ್ಲಿ ಬದಲಾಗುವ ಯುವ ಪೀಳಿಗೆಯ ಪಾತ್ರಗಳಿಗೆ ನಾವು ಸಾಕ್ಷಿಯಾಗಲಿ ದ್ದೇವೆ. ಮುಂದಿನ ದಿನಗಳಲ್ಲಿ ಇಂಥ ವಿಚಾರಗಳ ವಿರುದ್ಧ ಕೇವಲ ಧ್ವನಿಯನ್ನಷ್ಟೇ ನೀವು ಕೇಳುವುದಿಲ್ಲ. ಬದಲಿಗೆ ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿಗಳಿಂದಲೇ ಆ ಧ್ವನಿಯನ್ನು ಕೇಳಲಿದ್ದೀರಿ‘ ಎಂದು ನೂಯಿ ಹೇಳಿದರು.
‘ಇಂದಿನ ಯುವ ಸಮೂಹದವರು ತಮ್ಮ ವಿನೂತನ ಆಲೋಚನೆಗಳ ಮೂಲಕ ಭವಿಷ್ಯದಲ್ಲಿ ಎದುರಾಗುವ ಅಪಾಯವನ್ನು ಅರಿಯುತ್ತಾ, ಅದಕ್ಕೆ ಬೇಕಾದ ಪರಿಹಾರವನ್ನು ಕಂಡುಹಿಡಿಯುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ‘ ಎಂದು ನೂಯಿ ಒತ್ತಿ ಹೇಳಿದರು.
‘ಭೂ ಗ್ರಹದ ಭವಿಷ್ಯ ಮತ್ತು ವಿಶ್ವದಾದ್ಯಂತವಿರುವ ನಿಮ್ಮ ಸಹೋದರ ಸಹೋದರಿಯರ ಯೋಗಕ್ಷೇಮವನ್ನು ನೋಡಿಕೊಳ್ಳಿ‘ ಎಂದು ಇಂದ್ರ ನೂಯಿ ಅವರು ಯುವ ಸಮೂಹವನ್ನು ಉತ್ತೇಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.