ನ್ಯೂಯಾರ್ಕ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಿತ ‘ಶೂನ್ಯ ಸಹನೆ’ ವಲಸೆ ನೀತಿಯನ್ನು ವಿರೋಧಿಸಿ ವಲಸಿಗ ಮಹಿಳೆಯೊಬ್ಬರು ಐತಿಹಾಸಿಕಸ್ವಾತಂತ್ರ್ಯ (ಲಿಬರ್ಟಿ) ಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸುಮಾರು ಮೂರು ತಾಸು ಪ್ರತಿಭಟನೆ ನಡೆಸಿದ ಥೆರೇಸೆ ಪ್ಯಾಟ್ರಿಸಿಯಾ ಒಕೊಮೌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 44 ವರ್ಷದ ಥೆರೇಸೆ ಕಾಂಗೊ ಗಣರಾಜ್ಯದವರು.
ಟ್ರಂಪ್ ಅವರ ಕಠಿಣ ವಲಸೆ ನೀತಿಯ ಪರಿಣಾಮ ಕಳೆದ ಏಪ್ರಿಲ್ ಮತ್ತು ಮೇನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ತಮ್ಮ ತಂದೆ–ತಾಯಿ ಹಾಗೂ ಪೋಷಕರಿಂದ ದೂರವಾಗಬೇಕಾಯಿತು ಎಂದು ಥೆರೇಸೆ ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕದ ಸ್ವಾತಂತ್ರ್ಯ ದಿನವಾದ ಜುಲೈ 4ರಂದು ಹೆಚ್ಚು ಪ್ರವಾಸಿಗರು ಸ್ವಾತಂತ್ರ್ಯ ಪ್ರತಿಮೆ ವೀಕ್ಷಣೆಗೆ ಬಂದಿದ್ದ ಸಂದರ್ಭದಲ್ಲಿ ಥೆರೇಸೆ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ, ಮೆಟ್ಟಿಲುಗಳಿಂದ ಕೆಳಗೆ ಇಳಿಯಲು ಅವರು ನಿರಾಕರಿಸಿದರು. ಎಲ್ಲ ಮಕ್ಕಳನ್ನು ಬಿಡುಗಡೆಗೊಳಿಸುವವರೆಗೆ ಕೆಳಗೆ ಇಳಿಯುವುದಿಲ್ಲ ಎಂದು ಅವರು ಪಟ್ಟು ಹಿಡಿದರು ಎಂದು ನ್ಯೂಯಾರ್ಕ್ ಪೊಲೀಸರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಮೂರು ತಾಸುಗಳ ಪ್ರಯತ್ನದ ನಂತರ, ಪೊಲೀಸರು ಅವರನ್ನು ಇಳಿಸಿದ್ದಾರೆ. ನಂತರ ಥೆರೇಸೆ ಕ್ಷಮೆಯಾಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥೆರೇಸೆ ಮಾತ್ರವಲ್ಲದೆ, ವಲಸಿಗ ಗುಂಪೊಂದು ಈ ಪ್ರತಿಭಟನೆಗೆ ಕೈಜೋಡಿಸಿತ್ತು.
ಅತಿಕ್ರಮ ಪ್ರವೇಶ ಹಾಗೂ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿ ಆರೋಪದಡಿ ಥೆರೇಸೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಸ್ವಾತಂತ್ರ್ಯ ಪ್ರತಿಮೆ 93 ಮೀಟರ್ ಎತ್ತರವಿದೆ. ಅಮೆರಿಕದ ಜನರಿಗೆ ಫ್ರಾನ್ಸ್ ನೀಡಿದ ಕೊಡುಗೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.