ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿರುವುದು ಓರ್ವ ಪದವೀಧರ ಶಿಕ್ಷಕಿ ಎಂಬುದು ಇದೀಗ ಹೊರಬಿದ್ದಿದೆ. ದಾಳಿ ನಡೆಸಿದ ಮಹಿಳೆ ತಿಂಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಗೆ ದಾಖಲಾಗಿದ್ದರು ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ 30 ವರ್ಷದ ಮಹಿಳೆ, ಕರಾಚಿ ವಿಶ್ವವಿದ್ಯಾನಿಲಯದ ಕನ್‌ಪ್ಯೂಷಿಯಸ್ ಇನ್‌ಸ್ಟಿಟ್ಯೂಟ್, ಚೀನೀ ಭಾಷೆ ಕಲಿಕೆ ಮತ್ತು ಸಾಂಸ್ಕೃತಿಕ ಕೇಂದ್ರದ ಹೊರಗೆ ಆತ್ಮಾಹುತಿ ದಾಳಿ ನಡೆಸುವ ಮೂಲಕ ಮಿನಿವ್ಯಾನ್ ಅನ್ನು ಸ್ಫೋಟಿಸಿದ್ದರು. ದುರ್ಘಟನೆಯಲ್ಲಿ ಮೂವರು ಚೀನೀ ಶಿಕ್ಷಕರು ಮತ್ತು ಪಾಕಿಸ್ತಾನದ ಚಾಲಕ ಸಾವಿಗೀಡಾಗಿದ್ದರು.
ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಪ್ರಜೆಗಳ ವಿರುದ್ಧ ಈ ವರ್ಷ ನಡೆದ ಮೊದಲ ಪ್ರಮುಖ ದಾಳಿ ಇದಾಗಿದ್ದು, ಬೀಜಿಂಗ್ ತೀವ್ರವಾಗಿ ಖಂಡಿಸಿದೆ.
ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದಿರುವ ಇಬ್ಬರು ಮಕ್ಕಳ ತಾಯಿ ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆ ವಿರೋಧಿಸಿ ಚೀನಾವನ್ನು ಗುರಿಯಾಗಿಸಿಕೊಂಡು ಸ್ವಯಂಪ್ರೇರಿತರಾಗಿ ಈ ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿದೆ.
'ಈ ಶೋಷಣೆಯ ಯೋಜನೆಗಳನ್ನು ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ದಾಳಿಗಳು ಇನ್ನಷ್ಟು ಪ್ರಬಲವಾಗಿರುತ್ತವೆ’ಎಂದು ಬಲೂಚ್ ಲಿಬರೇಶನ್ ಆರ್ಮಿ ಇಮೇಲ್ ಮೂಲಕ ಚೀನಾಗೆ ಎಚ್ಚರಿಕೆ ನೀಡಿದೆ.
‘ತಮ್ಮ ಪ್ರಾಂತ್ಯದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲಿಗಾಗಿ ಬಲೂಚ್ ಪ್ರತ್ಯೇಕತಾವಾದಿ ಗೆರಿಲ್ಲಾಗಳು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ ನೈಸರ್ಗಿಕ ಅನಿಲ ಯೋಜನೆಗಳು, ಮೂಲಸೌಕರ್ಯ ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಗಳನ್ನು ಕೇಂದ್ರೀಕರಿಸಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಚೀನಾದ ಯೋಜನೆಗಳು ಮತ್ತು ಕಾರ್ಮಿಕರ ಮೇಲೆ ದಾಳಿ ಮಾಡುತ್ತಿದ್ದಾರೆ.
ಬಲೂಚಿಸ್ತಾನ ಮತ್ತು ಗ್ವಾದರ್‌ನ ಆಳ ಸಮುದ್ರದ ಬಂದರು, ಮಧ್ಯಪ್ರಾಚ್ಯ ಮತ್ತು ಅದರಾಚೆಗೆ ಚಾಚಿಕೊಂಡಿರುವ ಚೀನಾದ ಬೆಲ್ಟ್ ಮತ್ತು ರೋಡ್ ನೆಟ್‌ವರ್ಕ್‌ನ ಮೂಲಸೌಕರ್ಯ ಮತ್ತು ಇಂಧನ ಯೋಜನೆಗೆ ಪ್ರಮುಖ ಕೊಂಡಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.