ADVERTISEMENT

ಪುಟಿನ್‌ ಜೊತೆಗೆ ರಹಸ್ಯ ಸಂಬಂಧ ಹೊಂದಿದ್ದ ಮಹಿಳೆ ಹೆಸರು ಪಂಡೋರಾ ಪೇಪರ್ಸ್‌ನಲ್ಲಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 15:43 IST
Last Updated 4 ಅಕ್ಟೋಬರ್ 2021, 15:43 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆಹಲವು ವರ್ಷಗಳ ರಹಸ್ಯ ಸಂಬಂಧ ಹೊಂದಿದ್ದ ಸ್ವೆಟ್ಲಾನಾ ಕ್ರಿವೊನೋಗಿಖ್ ಅಂದಾಜು 100 ಮಿಲಿಯನ್ ಡಾಲರ್ (₹744 ಕೋಟಿ) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಪಂಡೋರಾ ಪೇಪರ್ಸ್ ಬಹಿರಂಗಪಡಿಸಿದೆ.

ಸಾಧಾರಣ ಹಿನ್ನೆಲೆಯ ಕ್ರಿವೊನೋಗಿಖ್, 2003ರಲ್ಲಿ ತಮ್ಮ ಮಗಳಿಗೆ ಜನ್ಮ ನೀಡಿದ ವಾರಗಳ ನಂತರ ಮೊನಾಕೊ ಅಪಾರ್ಟ್‌ಮೆಂಟ್‌ ಅನ್ನು 4.1 ದಶಲಕ್ಷ ಡಾಲರ್‌ಗೆ (₹30 ಕೋಟಿ) ಖರೀದಿಸಿದ್ದರು. ಅಲ್ಲದೆ ಅವರು ಶೆಲ್ ಕಂಪನಿಯನ್ನು ಹೊಂದಿದ್ದಾರೆ ಎಂದು ದಾಖಲೆಗಳಿಂದ ಬಹಿರಂಗವಾಗಿದೆ. ಈ ಕುರಿತು ‘ಬ್ಯುಸಿನೆಸ್‌ ಇನ್‌ಸೈಡರ್‌’ ವರದಿ ಮಾಡಿದೆ.

ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್‌ ಡೀಲರ್‌ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.

ADVERTISEMENT

ವಾಷಿಂಗ್ಟನ್‌ ಪೋಸ್ಟ್‌, ಬಿಬಿಸಿ ಹಾಗೂ ದಿ ಗಾರ್ಡಿಯನ್‌ ಸೇರಿದಂತೆ 150 ಮಾಧ್ಯಮಗಳ, 117 ರಾಷ್ಟ್ರಗಳ ಸುಮಾರು 600 ಪತ್ರಕರ್ತರು ಪಂಡೋರಾ ಪೇಪರ್ಸ್‌ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಜಗತ್ತಿನಾದ್ಯಂತ ಇರುವ 14 ಹಣಕಾಸು ಸೇವಾ ಕಂಪನಿಗಳ ಸುಮಾರು 11.9 ದಶಲಕ್ಷ ದಾಖಲೆಗಳು ಸೋರಿಕೆಯಾಗಿವೆ. ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ವರದಿ ಬಿಡುಗಡೆ ಮಾಡಿದೆ.

ಭಾರತದ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌, ಪಾಂಪ್‌ ಮ್ಯೂಸಿಕ್‌ ತಾರೆ ಶಕೀರಾ, ಸೂಪರ್‌ಮಾಡೆಲ್ ಕ್ಲೌಡಿಯಾ ಶಿಫರ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೆಸರುಗಳಿರುವುದು ಪತ್ತೆಯಾಗಿದೆ. ಉದ್ಯಮಿ ಅನಿಲ್‌ ಅಂಬಾನಿಗೆ ಸೇರಿದ 1.3 ಬಿಲಿಯನ್‌ ಡಾಲರ್‌ (ಅಂದಾಜು ₹9,640 ಕೋಟಿ) ಮೌಲ್ಯದ ಸಾಗರೋತ್ತರ ವ್ಯವಹಾರಗಳ ವಿವರಗಳೂ ಇದರಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.