ADVERTISEMENT

ಪರಿವರ್ತನೆಯ ಹಾದಿಯಲ್ಲಿರುವ ಭಾರತವನ್ನು ಜಗತ್ತು ಮೆಚ್ಚಿದೆ: ಪ್ರಧಾನಿ ಮೋದಿ

ಜಪಾನ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಭಾಷಣ

ಏಜೆನ್ಸೀಸ್
Published 29 ಅಕ್ಟೋಬರ್ 2018, 2:13 IST
Last Updated 29 ಅಕ್ಟೋಬರ್ 2018, 2:13 IST
   

ಟೋಕಿಯೊ: ಭಾರತವಿಂದು ಮಹಾನ್ ಪರಿವರ್ತನೆಯ ಹಾದಿಯಲ್ಲಿದೆ. ಮಾನವೀಯತೆಯೆಡೆಗಿನ ಸೇವೆಗಾಗಿ ಭಾರತವನ್ನು ಜಗತ್ತು ಮೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಪಾನ್‌ನ ಟೋಕಿಯೊದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ರೂಪಿಸಲಾಗುತ್ತಿರುವ ನೀತಿಗಳು, ಸಾರ್ವಜನಿಕರ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿತ್ತಿರುವ ಕೆಲಸಗಳಿಗಾಗಿ ಭಾರತವನ್ನಿಂದು ಗುರುತಿಸಲಾಗುತ್ತಿದೆ’ ಎಂದು ಹೇಳಿದರು.

ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತದಲ್ಲಿ ಅತ್ಯದ್ಭುತವಾದ ಬೆಳವಣಿಗೆಯಾಗುತ್ತಿದೆ. ಬ್ರಾಡ್‌ಬ್ರ್ಯಾಂಡ್‌ ಸಂಪರ್ಕ ಹಳ್ಳಿಹಳ್ಳಿಗಳಿಗೂ ತಲುಪುತ್ತಿದೆ. ದೇಶದಲ್ಲಿಂದು ಸುಮಾರು 100 ಕೋಟಿ ಮೊಬೈಲ್‌ಫೋನ್‌ಗಳು ಚಾಲ್ತಿಯಲ್ಲಿವೆ. ತಂಪು ಪಾನೀಯದ ಒಂದು ಸಣ್ಣ ಬಾಟಲ್‌ ದರಕ್ಕಿಂತಲೂ 1 ಜಿಬಿ ಇಂಟರ್‌ನೆಟ್ ಭಾರದಲ್ಲಿ ಅಗ್ಗವಾಗಿದೆ.‘ಭಾರತದಲ್ಲಿ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಇಂದು ಜಾಗತಿಕ ಬ್ರ್ಯಾಂಡ್‌ ಆಗಿದೆ. ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಬೇಕಾಗುವಂತಹ ಗುಣಮಟ್ಟದ ಉತ್ಪನ್ನಗಳನ್ನು ನಾವು ತಯಾರಿಸುತ್ತಿದ್ದೇವೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಅಟೊಮೊಬೈಲ್ ಉತ್ಪಾದನೆಯಲ್ಲಿ ಭಾರತವು ಜಾಗತಿಕ ಹಬ್ ಆಗುತ್ತಿದೆ. ಮೊಬೈಲ್‌ಫೊನ್ ತಯಾರಿಯಲ್ಲಿ ನಂಬರ್ 1 ಆಗುವತ್ತ ಹೆಜ್ಜೆ ಹಾಕುತ್ತಿದ್ದೇವೆ.ಕಳೆದ ವರ್ಷ ಸುಮಾರು 100 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ನಮ್ಮ ವಿಜ್ಞಾನಿಗಳು ದಾಖಲೆ ನಿರ್ಮಿಸಿದ್ದಾರೆ ಎಂದು ಮೋದಿ ಹೇಳಿದರು.

‘ಸರ್ದಾರ್ ವಲ್ಲಬಭಾಯಿ ಪಟೇಲ್ ಅವರ ಜನ್ಮದಿನವನ್ನು ನಾವು ಪ್ರತಿ ವರ್ಷ ಆಚರಿಸುತ್ತೇವೆ. ಆದರೆ ಈ ವರ್ಷ ಇಡೀ ಜಗತ್ತಿನ ಗಮನ ಸೆಳೆಯುವಂತೆ ಆಚರಿಸಲಿದ್ದೇವೆ. ಗುಜರಾತ್‌ನಲ್ಲಿ, ಪಟೇಲ್ ಅವರ ಹುಟ್ಟೂರಿನಲ್ಲಿ ಅವರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದೇವೆ. ಇದು ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿರಲಿದೆ’ ಎಂದೂ ಮೋದಿ ಹೇಳಿದರು.

ಭಾರತ–ಜಪಾನ್‌ 12ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಶನಿವಾರ ಟೋಕಿಯೊಕ್ಕೆ ಬಂದಿರುವಮೋದಿ ಭಾನುವಾರ ಫ್ಯುಜಿ ದ್ವೀಪದ ಬಳಿ ಇರುವ ಯಾಮಾನಶಿ ನಿವಾಸದಲ್ಲಿ ರಜೆ ಕಳೆಯುತ್ತಿರುವ ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಉಭಯ ನಾಯಕರ ಅನೌಪಚಾರಿಕ ಮಾತುಕತೆ ವೇಳೆ ಚೀನಾ ಜತೆಗಿನ ಸಂಬಂಧ ಪ್ರಮುಖವಾಗಿ ಪ್ರಸ್ತಾಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.