ADVERTISEMENT

3ನೇ ಮಹಾಯುದ್ಧ ದೂರವಿಲ್ಲ : ಟ್ರಂಪ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 12:40 IST
Last Updated 5 ಏಪ್ರಿಲ್ 2023, 12:40 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದಲ್ಲಿ ಜಗತ್ತು ಮೂರನೇ ಪರಮಾಣು ಮಹಾಯುದ್ಧ ಎದುರಿಸುವ ಸಾಧ್ಯತೆ ಇದೆ. ಅಮೆರಿಕ ಸರ್ಕಾರ ದೇಶವನ್ನು ನಾಶ ಮಾಡುತ್ತಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದರು.

ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್‌ ಪ್ರಕರಣದ ವಿಚಾರಣೆ ಎದುರಿಸಿದ ಟ್ರಂಪ್‌, ನ್ಯೂಯಾರ್ಕ್‌ನಿಂದ ಫ್ಲೋರಿಡಾಗೆ ವಾಪಸ್ ಬಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

‘ಪರಮಾಣು ಅಸ್ತ್ರ ಬಳಕೆ ಮಾಡುವ ಬಗ್ಗೆ ಹಲವು ದೇಶಗಳಿಂದ ಬಹಿರಂಗ ಬೆದರಿಕೆ ಇದೆ. ಆದಾಗ್ಯೂ ಬೈಡನ್‌ ಆಡಳಿತದಲ್ಲಿ ಇತರ ದೇಶಗಳು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ, ಚರ್ಚೆ ನಡೆಸುತ್ತಿಲ್ಲ. ಇದು ಜಗತ್ತು ಮೂರನೇ ಪರಮಾಣು ಯುದ್ಧ ಎದುರಿಸಲು ಕಾರಣವಾಗಬಹುದು. ನೀವು ನಂಬಿ ಅಥವಾ ಬಿಡಿ ಮೂರನೇ ಮಹಾಯುದ್ಧಕ್ಕೆ ಹೆಚ್ಚೇನೂ ದೂರ ಇಲ್ಲ’ ಭವಿಷ್ಯ ನುಡಿದರು.

ADVERTISEMENT

‘ಬೈಡನ್‌ ಆಡಳಿತದಲ್ಲಿ ಆರ್ಥಿಕತೆ ಕುಸಿಯುತ್ತಿದೆ, ಹಣದುಬ್ಬರ ನಿಯಂತ್ರಣ ಮೀರಿದೆ. ರಷ್ಯಾ ಚೀನಾದೊಂದಿಗೆ ಕೈಜೋಡಿಸಿದೆ. ಸೌದಿ ಅರೇಬಿಯಾ ಇರಾನ್ ಜೊತೆ ಸೇರಿದೆ. ಚೀನಾ, ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾ ಒಟ್ಟಾಗಿ ವಿನಾಶಕಾರಿ ಒಕ್ಕೂಟ ರಚನೆ ಮಾಡಿಕೊಂಡಿವೆ. ನನ್ನ ಆಡಳಿತಾವಧಿಯಲ್ಲಿ ಇಂಥದ್ದು ಘಟಿಸಿರಲಿಲ್ಲ’ ಎಂದು ಹೇಳಿದರು.

‘ನಾನು ಅಮೆರಿಕ ಅಧ್ಯಕ್ಷನಾಗಿದ್ದರೆ ಇದೆಲ್ಲ ಸಾಧ್ಯವೇ ಇರಲಿಲ್ಲ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುತ್ತಿರಲಿಲ್ಲ. ಎಲ್ಲರೂ ಬದುಕುಳಿಯುತ್ತಿದ್ದರು. ಸುಂದರ ನಗರಗಳು ಸ್ವಚ್ಛಂದವಾಗಿ ಇರುತ್ತಿದ್ದವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.