ADVERTISEMENT

800 ಕೋಟಿ ಮುಟ್ಟಿದ ಜಾಗತಿಕ ಜನಸಂಖ್ಯೆ: 2023ಕ್ಕೆ ಚೀನಾವನ್ನು ಮೀರಿಸಲಿರುವ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2022, 5:28 IST
Last Updated 15 ನವೆಂಬರ್ 2022, 5:28 IST
   

ನವದೆಹಲಿ: ಜಾಗತಿಕ ಜನಸಂಖ್ಯೆ ಮಂಗಳವಾರ 800 ಕೋಟಿಗೆ ಮುಟ್ಟಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಇದೊಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ‌.

ಮಂಗಳವಾರ ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದ್ದು, 2030ಕ್ಕೆ 850 ಕೋಟಿಗೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

2050ಕ್ಕೆ ವಿಶ್ವ ಜನಸಂಖ್ಯೆ 970 ಕೋಟಿ ತಲುಪಲಿದೆ ಎಂದು ನಂಬಲಾಗಿದ್ದು, 2100ರ ಹೊತ್ತಿಗೆ 1040 ಕೋಟಿಗೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ADVERTISEMENT

ವಿಶ್ವ ಜನಸಂಖ್ಯೆ 700 ಕೋಟಿಯಿಂದ 800 ಕೋಟಿಗೆ ತಲುಪಲು 12 ವರ್ಷ ತಗುಲಿದೆ. ಇದು 900 ಕೋಟಿಗೆ ತಲುಪಲು 15 ವರ್ಷ ಬೇಕಾಗ‌ಬಹುದು. ಅಂದರೆ 2037ರ ವೇಳೆಗೆ ಜಾಗತಿಕ ಜನಸಂಖ್ಯೆ 900 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

1950ರ ಬಳಿಕ ಜಾಗತಿಕ ಜನಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದೆ. 2020ರ ಬಳಿಕ ಜನಸಂಖ್ಯೆ ಏರಿಕೆ ಪ್ರಮಾಣ ಶೇ 1 ಕ್ಕಿಂತ ಕಡಿಮೆಗೆ ಇಳಿದಿದೆ ‌ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

2050ರ ವರೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಶೇ 50 ಕ್ಕಿಂತ ಹೆಚ್ಚು ಜನಸಂಖ್ಯೆ ಕಾಂಗೋ, ಈಜಿಪ್ಟ್‌, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಪೀನ್ಸ್‌ ಹಾಗೂ ತಾಂಜೇನಿಯಾದಲ್ಲಿ ಇರಲಿದೆ.

2023ಕ್ಕೆ ಚೀನಾವನ್ನು ಮೀರಿಸಲಿರುವ ಭಾರತ


2023ರಕ್ಕೆ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಹೀಗಾದಲ್ಲಿ ಭಾರತ, ಅತೀ ಹೆಚ್ಚು ಜನಸಂಖ್ಯೆ ಇರುವ ಜಗತ್ತಿನ ನಂಬರ್‌ 1 ದೇಶವಾಗಲಿದೆ. ಸದ್ಯ ಭಾರತ‌ದ ಜನಸಂಖ್ಯೆ 141 ಕೋಟಿ ಹಾಗೂ ಚೀನಾದ ಜನಸಂಖ್ಯೆ 145 ಕೋಟಿ ಎಂದು ವಿಶ್ವಸಂಸ್ಥೆ ಹೇಳಿದೆ.

ಜನಸಂಖ್ಯೆ ಹೆಚ್ಚಳಕ್ಕೆ ಕಾರಣವೇನು?

ಶಿಶುಮರಣ ಇಳಿಕೆ, ಪೋಷಕಾಂಶಯುಕ್ತ ಆಹಾರ ಸೇವೆ‌ನೆ, ಜೀವಿತಾವಧಿ ಹೆಚ್ಚಳದಿಂದ ಜನಸಂಖ್ಯೆ ಹೆಚ್ಚಳವಾಗಿದೆ ಎನ್ನುವುದು ವಿಶ್ವಸಂಸ್ಥೆಯ ವರದಿ. 2019ರಲ್ಲಿ ಜಾಗತಿಕ ಜೀವಿತಾವಧಿ ಸರಾಸರಿ 72.8 ವರ್ಷ ಇತ್ತು. 2050ರ ವೇಳೆಗೆ ಇದು 77.2 ವರ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.