ಲಂಡನ್: ಎರಡನೇ ಮಹಾಯುದ್ಧದಲ್ಲಿ ಬ್ರಿಟನ್ ಪರ ಗೂಢಾಚಾರಿಕೆ ಮಾಡಿ, ಜರ್ಮನಿಯಲ್ಲಿ ಧಾರುಣವಾಗಿ ಹತ್ಯೆಯಾಗಿದ್ದ ಟಿಪ್ಪು ವಂಶಸ್ಥೆ, ನೂರ್ ಇನಾಯತ್ ಖಾನ್ ಬ್ರಿಟನ್‌ನಲ್ಲಿ ಗೌರವ–ಕೃತಜ್ಞತೆಗೆ ಪಾತ್ರರಾಗಿದ್ದಾರೆ.
ಮಧ್ಯ ಲಂಡನ್‌ನಲ್ಲಿ ನೂರ್ ಅವರು ನೆಲೆಸಿದ್ದ ಮನೆಯ ಗೋಡೆ ಮೇಲೆ ಅವರ ಹೆಸರಿನಲ್ಲಿ ನೀಲಿ ಫಲಕ ಹಾಕಿ ಬ್ರಿಟನ್ ಶುಕ್ರವಾರ ಸ್ಮರಿಸಿದೆ. ದೇಶಕ್ಕಾಗಿ ಗಮನಾರ್ಹ ಕೊಡುಗೆ ನೀಡಿದವರ ಹೆಸರನ್ನು, ಅವರ ಮನೆಯ ಗೋಡೆಯ ಮೇಲೆ ನೀಲಿ ಫಲಕದಲ್ಲಿ ಹಾಕಿ ಸ್ಮರಿಸುವ ಪರಂಪರೆಯನ್ನು ‘ಇಂಗ್ಲಿಷ್ ಹೆರಿಟೇಜ್’ ಎಂಬ ಚಾರಿಟಿ ಟ್ರಸ್ಟ್150 ವರ್ಷಗಳಿಂದಲೂ ಅನುಸರಿಸಿಕೊಂಡು ಬಂದಿದೆ.ಈ ಕಾರ್ಯಕ್ರಮದ ಅಡಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮೂಲದ ಮಹಿಳೆಯನ್ನು ಗೌರವಿಸಲಾಗಿದೆ.
2ನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ಮಡಿದ 75 ವರ್ಷಗಳ ನಂತರ ಬ್ರಿಟನ್ ಸರ್ಕಾರದಿಂದ ನೂರ್ ಅವರಿಗೆ ಈ ಮನ್ನಣೆ ದೊರಕಿದೆ..
ಲಂಡನ್‌ನಲ್ಲಿರುವ ‘4 ಟವೈಟೊನ್ ಸ್ಟ್ರೀಟ್, ಬ್ಲೂಮ್‌ಬರ್ಗ್’ ವಿಳಾಸದಲ್ಲಿರುವ ನೂರ್ ಅವರ ಮನೆ ಮೇಲೆ ನೀಲಿ ಫಲಕ ಹಾಕಲಾಗಿದೆ. 1943ರಲ್ಲಿ ನಾಜಿ ಆಕ್ರಮಿತ ಫ್ರಾನ್ಸ್‌ಗೆ ಬ್ರಿಟನ್‌ನ ವಿಶೇಷ ಕಾರ್ಯಾಚರಣೆಯ ರಹಸ್ಯ ರೇಡಿಯೊ ಆಪರೇಟರ್ ಆಗಿ ತೆರಳುವ ಮೊದಲು ನೂರ್ ಇದೇ ಮನೆಯಲ್ಲಿ ವಾಸವಾಗಿದ್ದರು.
ಭಾರತೀಯ ಸೂಫಿ ಸಂತ ಹಜರತ್ ಇನಾಯತ್ ಖಾನ್ ಅವರ ಪುತ್ರಿ ಮತ್ತು 18 ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರ ವಂಶಸ್ಥೆ ನೂರ್, 1944 ರಲ್ಲಿ ಜರ್ಮನಿಯ ‘ಡಚೌ ಕಾನ್ಸನ್‌ಟ್ರೇಷನ್ ಕ್ಯಾಂಪ್’ (ಯುದ್ಧ ಕೈದಿಗಳ ಶಿಬಿರ) ಹತ್ಯೆಗೀಡಾಗಿದ್ದರು. ಆದರೆ, ಆಕೆ ಸಾವಿಗೂ ಮುನ್ನ ತನಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಜರ್ಮನಿಗೆ ತಿಳಿಸಿರಲಿಲ್ಲ. ಕೊನೆಗೆ ತನ್ನ ಹೆಸರನ್ನೂ ಹೇಳಿರಲಿಲ್ಲ.
‘ತಮ್ಮ ಕೊನೆಯ ಕಾರ್ಯಾಚರಣೆಗಾಗಿ ನೂರ್ ಇನಾಯತ್ ಖಾನ್ ಈ ಮನೆಯನ್ನು ತೊರೆದಾಗ, ಮುಂದೆ ತಾವು ಧೈರ್ಯದ ಸಂಕೇತವಾಗಬಹುದೆಂದು ಕನಸನ್ನೂ ಕಂಡಿರಲಿಲ್ಲ’ ಎಂದು ಇತಿಹಾಸಕಾರ ಮತ್ತು ‘ಸ್ಪೈ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್’ ಪುಸ್ತಕದ ಲೇಖಕ ಶ್ರಬಾನಿ ಬಸು ಅಭಿಪ್ರಾಯಪಟ್ಟರು.
ಮೈಸೂರು ಮತ್ತು ಬರೋಡಾದ ಮಹಾರಾಜರ ಮನ್ನಣೆಗೆ ಪಾತ್ರರಾಗಿದ್ದ ಮೌಲಾಭಕ್ಷ್ ದೇಶದ ಸಂಗೀತ ಪರಂಪರೆಯ ಬಹುಮುಖ್ಯವಾದ ಕೊಂಡಿ ಎನಿಸಿದ್ದರು. ಮೌಲಾಭಕ್ಷ್ ಅವರು ಟಿಪ್ಪೂವಿನ ಮೊಮ್ಮಗಳೊಂದಿಗೆ ವಿವಾಹವಾಗಿದ್ದರು. ಈ ದಂಪತಿಯ ಮೊಮ್ಮಗಳು ನೂರ್. ಭಾರತೀಯ ತಂದೆ, ಅಮೆರಿಕನ್ ತಾಯಿ, ರಷ್ಯಾದಲ್ಲಿ ಜನನ, ಫ್ರಾನ್ಸ್‌ನಲ್ಲಿ ಬಾಲ್ಯ, ಬ್ರಿಟಿಷರ ಪರವಾಗಿ ಕಾರ್ಯನಿರ್ವಹಣೆ, ಕೊನೆಗೆ ಜರ್ಮನಿಯಲ್ಲಿ ದಾರುಣಸಾವು. ಇದು ನೂರ್ ಅವರ ಸಂಕ್ಷಿಪ್ತ ಪರಿಚಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.