ವಾಷಿಂಗ್ಟನ್: ಉಕ್ರೇನ್ ವಿರುದ್ಧ ರಷ್ಯಾ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡಿದರೆ ಅತಿದೊಡ್ಡ ಗಂಭೀರ ತಪ್ಪಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ. ಪರಮಾಣು ಶಸ್ತ್ರಾಸ್ತ್ರವನ್ನು 'ಕೊಳಕು ಬಾಂಬ್' ಎಂದು ಕರೆದಿದ್ದಾರೆ.
ಶ್ವೇತಭವನದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಬೈಡನ್, ಒಂದು ಮಾತು ಹೇಳಲು ಬಯಸುತ್ತೇನೆ. ಯುದ್ಧತಂತ್ರದ ಭಾಗವಾಗಿ ಒಂದು ವೇಳೆ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಿದರೆ ರಷ್ಯಾ ಊಹೆಗೂ ಮೀರಿದ ಗಂಭೀರ ತಪ್ಪನೆಸೆಗಲಿದೆ ಎಂದರು.
ಉಕ್ರೇನ್ ಮೇಲೆ ರಷ್ಯಾ 'ಕೊಳಕು ಬಾಂಬ್' ಹಾಕುವ ಸಾಧ್ಯತೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಬೈಡನ್ ಉತ್ತರಿಸಿದರು.
'ಸಾಧ್ಯತೆಯನ್ನು ನಾನು ಅಲ್ಲಗಳೆಯುವುದಿಲ್ಲ. ನನಗೆ ಗೊತ್ತಿಲ್ಲ. ಆದರೆ ಅದು ಅತ್ಯಂತ ಗಂಭೀರವಾದ ತಪ್ಪಾಗಲಿದೆ' ಎಂದು ಬೈಡನ್ ಒತ್ತಿ ಹೇಳಿದರು.
ಉಕ್ರೇನ್ ವಿರುದ್ಧ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದು ದೊಡ್ಡ ತಪ್ಪಾಗಲಿದೆ. ಇದರಿಂದ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪರಮಾಣು ಬಾಂಬ್ ಬಳಕೆ ಸಾಧ್ಯತೆ ಬಗ್ಗೆ ಉಕ್ರೇನ್ ವಿರುದ್ಧ ರಷ್ಯಾ ತಪ್ಪು ಆರೋಪಗಳನ್ನು ಹೊರಿಸುತ್ತಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರಿನ್ ಜೆನ್ ಪಿಯೆರಾ ತಿಳಿಸಿದ್ದಾರೆ.
ಉಕ್ರೇನ್ ತನ್ನ ಪ್ರಾಂತ್ಯದ ಮೇಲೆಯೇ ಪರಮಾಣು ಬಾಂಬ್ ಹಾಕಲು ಸಿದ್ಧತೆ ನಡೆಸಿದೆ ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಲಾಗುತ್ತಿದೆ. ಇದು ರಷ್ಯಾ ಮಾಡುತ್ತಿರುವ ಸುಳ್ಳು ಆರೋಪ ಎಂದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸಂಧಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಜೆನ್ ಪಿಯೆರಾ, ಅದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ಬಿಟ್ಟ ವಿಚಾರ. ತನ್ನ ರಾಷ್ಟ್ರಕ್ಕಾಗಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.