ಲಂಡನ್/ ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ನಿಗದಿಯಾಗಿರುವ ಚುನಾವಣೆ ನಡೆಯುವ ಬಗ್ಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಜತೆಗೆ, 2022ರಲ್ಲಿ ಅಮೆರಿಕದ ಒತ್ತಡದಿಂದ ತಮ್ಮನ್ನು ಪದಚ್ಯುತಿಗೊಳಿಸಲಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
'ಪಾಕಿಸ್ತಾನ ಚುನಾವಣೆಗಳು ಪ್ರಹಸನವಾಗಲಿದೆ ಎಂಬ ಶೀರ್ಷಿಕೆಯೊಂದಿಗೆ ಇಮ್ರಾನ್ ಖಾನ್ ಹೆಸರಲ್ಲಿ ಬ್ರಿಟಿಷ್ ಪತ್ರಿಕೆ ‘ದಿ ಎಕನಾಮಿಸ್ಟ್’ನಲ್ಲಿ ಶುಕ್ರವಾರ ಲೇಖನವೊಂದು ಪ್ರಕಟಗೊಂಡಿದ್ದು, ಅದರಲ್ಲಿನ ಆರೋಪಗಳನ್ನು ಪಾಕಿಸ್ತಾನ ಸರ್ಕಾರ ಮತ್ತು ಅಮೆರಿಕ ನಿರಾಕರಿಸಿವೆ.
‘ಪಾಕಿಸ್ತಾನದ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಬರಹದಲ್ಲಿ ಕಟು ಟೀಕೆ ಮಾಡಲಾಗಿದೆ. ಖಾನ್ ಮಾಡುತ್ತಾ ಬಂದಿರುವ ಹಲವು ಆರೋಪಗಳನ್ನು ಪುನರುಚ್ಚರಿಸಲಾಗಿದೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಮತ್ತು ಸುಧಾರಣೆಗಳನ್ನು ತರಬೇಕಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಅಗತ್ಯವಿದೆ ಎಂದು ಬರಹದಲ್ಲಿ ಆಗ್ರಹಿಸಲಾಗಿದೆ. ಪ್ರಜಾಪ್ರಭುತ್ವಕ್ಕೆ ಮುತ್ತಿಗೆ ಹಾಕಲಾಗಿದೆ. ಪಾಕಿಸ್ತಾನವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ಖಾನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿತರಾಗಿದ್ದಾರೆ. ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಅವರು, ಅಧಿಕೃತ ರಹಸ್ಯ ಕಾಯಿದೆಯಡಿಯಲ್ಲಿನ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಚುನಾವಣೆ ಮುಂದೂಡುವ ನಿರ್ಣಯಕ್ಕೆ ಅಂಗೀಕಾರ: ವಿಪರೀತ ಚಳಿ ವಾತಾವರಣ ಹಾಗೂ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಫೆಬ್ರವರಿ 8ರಂದು ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡುವ ನಿರ್ಣಯಕ್ಕೆ ಪಾಕಿಸ್ತಾನ ಸೆನೆಟ್ ಶುಕ್ರವಾರ ಅಂಗೀಕಾರ ನೀಡಿದೆ.
ನಿರ್ಣಯ ಅಂಗೀಕಾರದಿಂದಾಗಿ ಪಾಕಿಸ್ತಾನದಲ್ಲಿರುವ ರಾಜಕೀಯ ಅನಿಶ್ಚಿತತೆ ಇನ್ನೂ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.