ನವದೆಹಲಿ: ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ಸಚಿವರ ಸಭೆಯಲ್ಲಿ ಮೀನುಗಾರರ ಹಿತಾಸಕ್ತಿಗಳ ರಕ್ಷಣೆ ಮತ್ತು ಆಹಾರ ಭದ್ರತೆಗಾಗಿ ಧಾನ್ಯಗಳ ದಾಸ್ತಾನಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭಾರತ ಬಯಸಿದೆ.
ಜತೆಗೆ, ಚೀನಾ ನೇತೃತ್ವದಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಒಪ್ಪಂದದ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಭಾರತ ಸಜ್ಜಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರ ನೇತೃತ್ವದ ಭಾರತೀಯ ನಿಯೋಗವು ಸಂಯುಕ್ತ ಅರಬ್ ಸಂಸ್ಥಾನದ ಅಬುಧಾಬಿಯಲ್ಲಿ ಸೋಮವಾರ ಆರಂಭವಾಗಲಿರುವ ಸಚಿವರ 13ನೇ ಸಮಾವೇಶದಲ್ಲಿ (ಎಂಸಿ13) ಪಾಲ್ಗೊಳ್ಳಲಿದೆ.
ಕೆಂಪು ಸಮುದ್ರದ ಬಿಕ್ಕಟ್ಟು, ಉಕ್ರೇನ್-ರಷ್ಯಾ ಯುದ್ಧ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಅನಿಶ್ಚಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಡಬ್ಲ್ಯುಟಿಒದ 164 ಸದಸ್ಯ ರಾಷ್ಟ್ರಗಳ ವಾಣಿಜ್ಯ ಸಚಿವರು ಇಲ್ಲಿ ಸಭೆ ಸೇರಲಿದ್ದು, ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಭಾರತವು ತನ್ನ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಾದ ಆಹಾರ ಭದ್ರತೆಗಾಗಿ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಕೃಷಿ ಸುಧಾರಣೆಗಳು, ಮೀನುಗಾರಿಕೆಗೆ ಸಹಾಯಧನ, ಇಕಾಮರ್ಸ್ ಮೇಲಿರುವ ಆಮದು ಸುಂಕಗಳ ನಿಷೇಧ, ವಿವಾದ ಇತ್ಯರ್ಥ ಮತ್ತು ಡಬ್ಲ್ಯುಟಿಒ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.